ನಿರ್ಮಾಣ ಹಂತದಲ್ಲಿದ್ದ ಹಡಗಿನಿಂದ ಕಂಪ್ಯೂಟರ್ ಸಾಧನ ಕದ್ದ ಆರೋಪ: ಇಬ್ಬರ ವಿರುದ್ಧ ಆರೋಪ ಪಟ್ಟಿ

Update: 2020-09-05 14:17 GMT

ಹೊಸದಿಲ್ಲಿ, ಸೆ.5: ಕೊಚ್ಚಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಮಾನವಾಹಕ ನೌಕೆಯಿಂದ ಕಂಪ್ಯೂಟರ್ ಸಾಧನಗಳನ್ನು ಕಳವುಗೈದ ಆರೋಪದಲ್ಲಿ ಎನ್‌ಐಎ ಇಬ್ಬರ ವಿರುದ್ಧ ಆರೋಪಪಟ್ಟಿ ದಾಖಲಿಸಿರುವುದಾಗಿ ವರದಿಯಾಗಿದೆ. ಬಿಹಾರದ ಮುಂಗೇರ್ ಜಿಲ್ಲೆಯ ನಿವಾಸಿ ಸುಮಿತ್ ಕುಮಾರ್ ಸಿಂಗ್ ಹಾಗೂ ರಾಜಸ್ತಾನದ ಹನುಮಾನ್‌ಗಢ ನಿವಾಸಿ ದಯಾರಾಮ್ ವಿರುದ್ಧ ಶುಕ್ರವಾರ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಕ್ತಾರರು ಹೇಳಿದ್ದಾರೆ.

 ಕೇರಳದ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಅಕ್ರಮ ಪ್ರವೇಶಿಸಿ ಅಲ್ಲಿ ನಿರ್ಮಾಣ ಹಂತದಲ್ಲಿದ್ದ ದೇಶೀಯ ನಿರ್ಮಿತ ವಿಮಾನವಾಹನ ನೌಕೆಯ ಪ್ರಮುಖ ಕಂಪ್ಯೂಟರ್ ಸಾಧನಗಳನ್ನು(ಪ್ರೊಸೆಸರ್, ರ್ಯಾಮ್, ಸಾಲಿಡ್ ಸ್ಟೇಟ್ ಡಿವೈಸಸ್)ಗಳನ್ನು ಕದ್ದಿರುವ ಆರೋಪದಲ್ಲಿ ಇವರಿಬ್ಬರ ವಿರುದ್ಧ ಪ್ರಕರಣವನ್ನು 2019ರ ಸೆಪ್ಟಂಬರ್ 16ರಂದು ಎರ್ನಾಕುಳಂ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಸೆಪ್ಟಂಬರ್ 26ರಂದು ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಸುಮಾರು 9 ತಿಂಗಳ ವಿಸ್ತೃತ ತನಿಖೆಯ ಬಳಿಕ ಇಬ್ಬರನ್ನು ಆರೋಪಿಗಳೆಂದು ಗುರುತಿಸಿ ವಶಕ್ಕೆ ಪಡೆಯಲಾಗಿದೆ. 2019ರ ಫೆಬ್ರವರಿಯಿಂದ ಸೆಪ್ಟಂಬರ್‌ವರೆಗೆ ಇವರಿಬ್ಬರು ಕೊಚಿನ್ ಶಿಪ್‌ಯಾರ್ಡ್‌ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸಿದ್ದರು.

ಈ ಸಂದರ್ಭ ನೌಕೆಯಲ್ಲಿದ್ದ ಅತ್ಯಾಧುನಿಕ ಕಂಪ್ಯೂಟರ್ ಸಾಧನಗಳನ್ನು ಕದ್ದಿದ್ದು ಇದರಲ್ಲಿ ಒಂದು ಸಾಧನವನ್ನು ಎರ್ನಾಕುಳಂನಲ್ಲೇ ಮಾರಿ, ಉಳಿದ ವಸ್ತುಗಳೊಂದಿಗೆ ಹುಟ್ಟೂರಿಗೆ ಪರಾರಿಯಾಗಿದ್ದರು. ಜೂನ್ 10ರಂದು ಇವರಿಬ್ಬರನ್ನು ಬಂಧಿಸಿ, ಅವರ ಬಳಿಯಿದ್ದ ಕದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News