ಉಡುಪಿ ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಪಿಯುಸಿ ಪೂರಕ ಪರೀಕ್ಷೆ
ಉಡುಪಿ, ಸೆ.5: ಸೆ.7ರಿಂದ ಸೆ.19ರವರೆಗೆ ಬೆಳಗ್ಗೆ 10:15ರಿಂದ 1:30 ಹಾಗೂ ಮಧ್ಯಾಹ್ನ 2:15ರಿಂದ ಸಂಜೆ 5:30ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಾಗಿ ಉಡುಪಿ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜು, ಎಂಜಿಎಂ ಪದವಿ ಪೂರ್ವ ಕಾಲೇಜು, ಕಾರ್ಕಳ ಭುವನೇಂದ್ರ ಪದವಿ ಪೂರ್ವ ಕಾಲೇಜು, ಕುಂದಾಪುರ ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಪೂರಕ ಪರೀಕ್ಷೆಯಲ್ಲಿ ಒಟ್ಟು 1718 ಅಭ್ಯರ್ಥಿ ಗಳು ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 1104 ಬಾಲಕರು ಹಾಗೂ 614 ಬಾಲಕಿಯರಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಕೇಂದ್ರದೊಳಗೆ ಬಿಡುವ ಸಂದರ್ಭ ದಲ್ಲಿ ಥರ್ಮಲ್ ಸ್ಕಾನರ್‌ನಿಂದ ಪರೀಕ್ಷಿಸಿ ಸ್ಯಾನಿಟೈಸ್ ಮಾಡಿಸಲಾಗುವುದು. ಮಾಸ್ಕ್ ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಕೊಠಡಿಗಳಲ್ಲಿ ಕನಿಷ್ಠ ಮೂರು ಅಡಿ ಗಳ ಅಂತರ ನೀಡಿ ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆ ಯುವ ವ್ಯವಸ್ಥೆ ಮಾಡಲಾಗಿದೆ.
ರೋಗದ ಲಕ್ಷ್ಮಣ ಮತ್ತು ಹೋಮ್ ಕ್ವಾರಂಟೈನ್‌ಗಳಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುವುದು. ಕೇಂದ್ರದಲ್ಲಿ ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕೇಂದ್ರದ ಮುಖ್ಯ ಅಧೀಕ್ಷಕರು ಪರೀಕ್ಷಾ ಕೆಲಸ ಕಾರ್ಯಗಳಿಗಾಗಿ ಸಾಮಾನ್ಯ ಮೊಬೈಲ್ ಬಳಸಲು ಅನುಮತಿ ನೀಡಲಾಗಿದೆ. ಪ್ರತಿ ಕೇಂದ್ರಗಳಿಗೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕೇಂದ್ರಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಇಲಾಖೆ ಉಪನಿರ್ದೇಶಕ ಭಗವಂತ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಸೋಂಕಿತ ವಿದ್ಯಾರ್ಥಿಗಳಿಗೂ ಅವಕಾಶ
ಕೋವಿಡ್ -19 ಸೋಂಕು ದೃಢಪಟ್ಟಿರುವ ವಿದ್ಯಾರ್ಥಿಗಳಿಗೂ ಪೂರಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಸೋಂಕಿತ ವಿದ್ಯಾರ್ಥಿಗಳಿಗೆ ಬನ್ನಂಜೆ ಬಾಲಕಿಯರ ವಸತಿ ನಿಲಯದಲ್ಲಿರುವ ಪ್ರತ್ಯೇಕವಾದ ಡಿಸೈನೆಟೆಡ್ ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಪೂರಕ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡ ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿರುವ ಬಗ್ಗೆ ಮಾಹಿತಿಯನ್ನು ಆಯಾ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಸಂಗ್ರಹಿಸಿ ಪ್ರಾಂಶುಪಾಲರು ಉಪನಿರ್ದೇಶಕರ ಕಚೇರಿಗೆ ನೀಡಿದ್ದಾರೆ. ಈ ರೀತಿ ಗುರುತಿಸಿರುವ ವಿದ್ಯಾರ್ಥಿ ಗಳನ್ನು ಕೋವಿಡ್ ಕೇರ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿ ಕೊಡಲಾಗಿದೆ ಎಂದು ಉಪನಿರ್ದೇಶಕ ಭಗವಂತ ಕಟ್ಟಿಮನಿ ತಿಳಿಸಿದ್ದಾರೆ.