ಮಂಗಳೂರು ಐಟಿ ಕಚೇರಿ ಗೋವಾಕ್ಕೆ ಎತ್ತಂಗಡಿ ವಿರುದ್ಧ ಮನವಿ
ಮಂಗಳೂರು, ಸೆ. 5: ಮಂಗಳೂರು ಐಟಿ ಕಚೇರಿಯನ್ನು ಗೋವಾಕ್ಕೆ ಎತ್ತಂಗಡಿ ಮಾಡುವುದರ ವಿರುದ್ಧ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ) ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ (ಐಸಿಎಐ) ನಿಯೋಗವು ಶನಿವಾರ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಿದೆ.
ಮಂಗಳೂರಿನಲ್ಲಿ ಆದಾಯ ತೆರಿಗೆ (ಆಡಳಿತ) ಪ್ರಧಾನ ಆಯುಕ್ತರ (ಪಿಸಿಐಟಿ) ಕಚೇರಿಯನ್ನು ಉಳಿಸಿಕೊಳ್ಳಬೇಕು. ಕೇಂದ್ರ ಮಂಡಳಿಯ ನೇರ ತೆರಿಗೆಗಳ ಅಧಿಕೃತ ಗೆಜೆಟ್ ಅಧಿಸೂಚನೆಯ ಪ್ರಕಾರ ಪಿಸಿಐಟಿ, ಮಂಗಳೂರು ಕಚೇರಿಯನ್ನು ರದ್ದುಗೊಳಿಸಿ ಗೋವಾದ ಪನಾಜಿಗೆ ಸ್ಥಳಾಂತರಿಸಲಾಗಿದೆ. ಇದರಿಂದ ತೆರಿಗೆದಾರರಿಗೆ ಸಮಸ್ಯೆಯಾಗಲಿದೆ ಎಂದು ನಿಯೋಗ ತಿಳಿಸಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಎಸ್‌ಎಸ್ ನಾಯಕ್, ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷ ಪ್ರದೀಪ್ ಜೋಗಿ, ಕಾರ್ಯದರ್ಶಿ ಲೋಕೇಶ್, ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್, ಸುದೇಶ್ ರೈ, ಅನಂತ ಪದ್ಮನಾಭ, ಅಬ್ದುರ್ರಹ್ಮಾನ್ ಮುಸ್ಬಾ, ಯಶಶ್ವಿನಿ ಕೆ ಅಮೀನ್ ಉಪಸ್ಥಿತರಿದ್ದರು.