ಕರಾವಳಿಯ ಜಾನುವಾರುಗಳಲ್ಲಿ ಲಂಪಿ ಚರ್ಮ ಗಂಟು ರೋಗ
ಮಂಗಳೂರು, ಸೆ. 5: ಲಂಪಿ ಚರ್ಮ ಗಂಟು ರೋಗವು ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವ ಒಂದು ವೈರಸ್ ಖಾಯಿಲೆ ಯಾಗಿದೆ. ಈ ಖಾಯಿಲೆಯು ಸೊಳ್ಳೆಗಳು, ನೊಣಗಳು ಮತ್ತು ಉಣ್ಣೆ (ಉನುಗು)ಗಳ ಮೂಲಕ ಜಾನುವಾರುಗಳಿಗೆ ಹರಡುತ್ತದೆ.
ರಾಜ್ಯದ ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ರೋಗವು ಕಂಡು ಬಂದಿದ್ದು, ಇತ್ತೀಚೆಗೆ ಉಡುಪಿ ಜಿಲ್ಲೆಯ ಕೆಲ ಭಾಗಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಈವರೆಗೆ ದ.ಕ. ಜಿಲ್ಲೆಯಲ್ಲಿನ ಜಾನುವಾರುಗಳಲ್ಲಿ ರೋಗದ ಲಕ್ಷಣಗಳು ಕಂಡು ಬಂದಿಲ್ಲ. ಒಂದು ವೇಳೆ ಜಾನುವಾರುಗಳಲ್ಲಿ ಲಂಪಿ ಚರ್ಮಗಂಟು ರೋಗದ ಲಕ್ಷಣಗಳು ಕಂಡು ಬಂದಲ್ಲಿ ರೈತರು ಯಾವುದೇ ಭಯ ಪಡದೆ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಯ ಪಶುವೈದ್ಯರನ್ನು ಅಥವಾ ಸಿಬ್ಬಂದಿಯನ್ನು ಸಂಪರ್ಕಿಸಲು ಪಶುಪಾಲನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರೋಗದ ಲಕ್ಷಣಗಳು: ರೋಗ ಬಂದ ಜಾನುವಾರುನಲ್ಲಿ ಜ್ವರ, ಮೈಮೇಲೆ ಗುಳ್ಳೆ, ಮುಂಗಾಲು ಬಾವು, ಎದೆ ಬಾವು, ಕೆಚ್ಚಲಲ್ಲಿ ಗುಳ್ಳೆ ಕಾಣಿಸಿಕೊಳ್ಳುತ್ತದೆ. ಜಾನುವಾರುಗಳು ಮಂಕಾಗಿ ಮೇವು ತಿನ್ನುವುದನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ.
ರೋಗದ ನಿಯಂತ್ರಣ: ಚರ್ಮಗಂಟು ರೋಗ ಕಂಡುಬಂದ ಜಾನುವಾರುಗಳನ್ನು ಇತರೆ ಜಾನುವಾರುಗಳಿಂದ ಪ್ರತ್ಯೇಕಿಸುವುದ ರಿಂದ ರೋಗ ಹರಡದಂತೆ ತಡೆಗಟ್ಟಬಹುದು. ಯಾವುದೇ ಕಾರಣಕ್ಕೂ ರೋಗ ಬಂದ ಜಾನುವಾರುಗಳನ್ನು ಕೃಷಿ ಕೆಲಸಕ್ಕೆ ಬಳಸದೆ 8ರಿಂದ 10ದಿನಗಳ ಕಾಲ ವಿಶ್ರಾಂತಿ ನೀಡಿ ಚಿಕಿತ್ಸೆ ನೀಡಬೇಕು. ಕೊಟ್ಟಿಗೆಯಲ್ಲಿ ಶುಚಿತ್ವವನ್ನು ಕಾಪಾಡುವುದು ಅತೀ ಮುಖ್ಯವಾಗಿದೆ. ಪ್ರತಿ ದಿನ ಕೊಟ್ಟಿಗೆಯನ್ನು ಶುಚಿಗೊಳಿಸುತ್ತಿರಬೇಕು. ಕೊಟ್ಟಿಗೆಯ ಸುತ್ತಮುತ್ತ ನೊಣ, ಸೊಳ್ಳೆಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು. ಜಾನುವಾರುಗಳಿಗೆ ಪೌಷ್ಠಿಕ ಆಹಾರ, ನೀರು ನೀಡಬೇಕು. ಜಾನುವಾರುಗಳ ಮೇಲ್ಮೈಗೆ ನೀಲಗಿರಿ ಎಣ್ಣೆ ಅಥವಾ ಬೇವಿನ ಎಣ್ಣೆ ಅಥವಾ ಸೊಳ್ಳೆ, ನೊಣ ನಿವಾರಕ ಮುಲಾಮು ಹಚ್ಚಬೇಕು. ಸೂಕ್ತ ಸಮಯದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಹಾಗೂ ಅಗತ್ಯವಿರುವ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವ ಮೂಲಕ ರೋಗ ವನ್ನು ನಿಯಂತ್ರಿಸಬಹುದಾಗಿದೆ.
ರೋಗವನ್ನು ನಿಯಂತ್ರಿಸಲು ಪಶುಪಾಲನಾ ಇಲಾಖೆಯ ಎಲ್ಲಾ ಪಶುವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸನ್ನದ್ಧರಾಗಿದ್ದು ರೈತರು ಇಲಾಖೆಯೊಂದಿಗೆ ಸಹಕರಿಸುವಂತೆ ದ.ಕ.ಜಿಲ್ಲಾ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.