ಎಡನೀರು ಶ್ರೀಗಳಿಗೆ ಉಡುಪಿಯಲ್ಲಿ ಶ್ರದ್ಧಾಂಜಲಿ
ಉಡುಪಿ, ಸೆ.6: ಕಳೆದ ರಾತ್ರಿ ನಿಧನರಾದ ಕಾಸರಗೋಡು ಎಡನೀರು ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠಾಧೀಶ ಶ್ರೀ ಕೇಶವಾ ನಂದ ಭಾರತಿ ತೀರ್ಥ ಮಹಾಸ್ವಾಮಿಗಳಿಗೆ ಶ್ರದ್ಧಾಂಜಲಿ ಸಭೆಯನ್ನು ಉಡುಪಿ ಎಸ್‌ಎಂಎಸ್‌ಪಿ ಸಂಸ್ಕೃತ ಮಹಾವಿದ್ಯಾಲಯ ಮತ್ತು ಸ್ವಾಮೀಜಿ ಅಭಿಮಾನಿಗಳ ವತಿಯಿಂದ ರವಿವಾರ ಕಾಲೇಜಿನ ಆವರಣದಲ್ಲಿ ನಡೆಯಿತು.
ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಎಡನೀರು ಸ್ವಾಮೀಜಿಯ ಅಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕೊಡುಗೆಗಳನ್ನು ಹಾಗೂ ಉಡುಪಿಯ ಮಠಗಳು ಸಂಸ್ಕೃತ ಕಾಲೇಜಿನೊಂದಿಗಿನ ಬಾಂಧವ್ಯವನ್ನು ಸ್ಮರಿಸಿ, ನುಡಿನಮನ ಸಲ್ಲಿಸಿದರು.
ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಪ್ರಾಚಾರ್ಯ ಡಾ.ಎನ್.ಎಲ್.ಭಟ್, ಪೇಜಾವರ ಮಠದ ದಿವಾನ ಎಂ. ರಘುರಾಮ ಆಚಾರ್ಯ, ಉದ್ಯಮಿ ಯಶ್ಪಾಲ್ ಸುವರ್ಣ, ಉಡುಪಿ ಸಾಮಾಜಿಕ ಅರಣ್ಯ ವಿಭಾಗ ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್ಯ, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ.ಭಟ್ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.