ಮರವಂತೆ ಬ್ರೇಕ್‌ವಾಟರ್ ಕಾಮಗಾರಿಯ ಲೋಪದ ಬಗ್ಗೆ ತನಿಖೆ: ಸಚಿವ ಕೋಟ
ಕುಂದಾಪುರ, ಸೆ. 6: ಮರವಂತೆಯಲ್ಲಿ ಈ ಹಿಂದೆ ನಡೆಸಲಾದ 42 ಕೋಟಿ ರೂ. ವೆಚ್ಚದ ಹೊರಬಂದರು ಹಾಗೂ ಬ್ರೇಕ್‌ವಾಟರ್ ನಿರ್ಮಾಣ ಕಾಮಗಾರಿ ಯಿಂದಾಗಿ ಮೀನುಗಾರರಿಗೆ ಯಾವುದೇ ರೀತಿಯ ಪ್ರಯೋಜನಗಳು ಆಗು ತ್ತಿಲ್ಲ. ಇದರಿಂದ ಹೆಚ್ಚಿನ ತೊಂದರೆ ಆಗುತ್ತಿರುವುದರಿಂದ ಈ ಕಾಮಗಾರಿಯ ಲೋಪದ ಬಗ್ಗೆ ತನಿಖೆ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ
ಗಂಗೊಳ್ಳಿಯ ಮೀನುಗಾರಿಕಾ ಬಂದರು, ಮರವಂತೆಯ ಹೊರಬಂದರು ಹಾಗೂ ಕೊಡೇರಿಯ ಬಂದರಿಗೆ ಶನಿವಾರ ಭೇಟಿ ನೀಡಿ, ಅಲ್ಲಿನ ಕಾಮಗಾರಿ ಗಳ ಕುರಿತು ಮಾಹಿತಿ ಹಾಗೂ ಮೀನುಗಾರರ ಸಮಸ್ಯೆಗಳನ್ನು ಆಲಿಸಿದ ಬಳಿಕ ಅವರು ಮಾಧ್ಯಮ ದವರೊಂದಿಗೆ ಮಾತನಾಡುತಿದ್ದರು.
ಮರವಂತೆಯ ಹೊರ ಬಂದರಿನ ಎರಡನೆ ಹಂತದ ಕಾಮಗಾರಿಗೆ 85 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಬಗ್ಗೆ ಟೆಂಡರ್ ಕರೆದು ಶೀಘ್ರವೇ ಕಾಮಗಾರಿಯನ್ನು ಆರಂಭಿಸ ಲಾಗುವುದು. ಇದರಿಂದ ಸಾಂಪ್ರ ದಾಯಿಕ ನಾಡದೋಣಿ ಮೀನುಗಾರರಿಗೆ ಅನುಕೂಲವಾಗಲಿದೆ ಎಂದರು.
ಗಂಗೊಳ್ಳಿಯ ಕುಸಿದು ಬಿದ್ದ ಜೆಟ್ಟಿ ಪುನರ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 12 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕಾಮಗಾರಿ ಆರಂಭಿಸಲು 4 ಕೋಟಿ ರೂ. ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ನೂತನ ಹರಾಜು ಪ್ರಾಂಗಣ ನಿರ್ಮಾಣಕ್ಕೆ 1.30 ಕೋಟಿ ರೂ. ಮಂಜೂರಾಗಿದೆ. ಇದರ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣ ಗೊಂಡಿದೆ ಎಂದು ಅವರು ಹೇಳಿದರು.
ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ, ಜಿಲ್ಲಾ ಉಪ ನಿರ್ದೇಶಕ ಗಣೇಶ ಕೆ., ಬಂದರು ಮತ್ತು ಮೀನುಗಾರಿಕೆ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ಮಂಚೇಗೌಡ, ಮೀನುಗಾರ ೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಉಪ್ಪುಂದದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೆಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ, ಜಿಪಂ ಸದಸ್ಯರಾದ ಬಾಬು ಶೆಟ್ಟಿ, ಶೋಭಾ ಪುತ್ರನ್, ಬೈಂದೂರು ತಾಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಸದಸ್ಯರಾದ ಸುರೇಂದ್ರ ಖಾರ್ವಿ, ಕರಣ್ ಪೂಜಾರಿ ಉಪಸ್ಥಿತರಿದ್ದರು.
ಕಾಮಗಾರಿ ನಿಗಾಕ್ಕಾಗಿ ಸಮಿತಿ
ಗಂಗೊಳ್ಳಿ ಜೆಟ್ಟಿ ಪುನರ್ ನಿರ್ಮಾಣ ಮತ್ತು ಹರಾಜು ಪ್ರಾಂಗಣ ನಿರ್ಮಾಣ, ಮರವಂತೆ ಹೊರಬಂದರು ನೀಲ ನಕಾಶೆ ಮತ್ತು ಸವಿವರವನ್ನು ಬಂದರು ವಠಾರದಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಬೇಕು. ಕಾಮ ಗಾರಿಯ ಗುಣಮಟ್ಟವನ್ನು ಕಾಲ ಕಾಲಕ್ಕೆ ಪರಿಶೀಲಿಸಿ ಯಾವುದೇ ಲೋಪ ದೋಷ ಬಾರದಂತೆ ನೋಡಿಕೊಳ್ಳಲು ಮೀನುಗಾರರು, ತಜ್ಞರು, ಅಧಿಕಾರಿ ಗಳನ್ನೊಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.