ಗುಜರಾತ್ ಹಿಂಸಾಚಾರ: ಸಿವಿಲ್ ಮೊಕದ್ದಮೆಯಿಂದ ಪ್ರಧಾನಿ ಮೋದಿ ಹೆಸರು ತೆಗೆಯಲು ಕೋರ್ಟ್ ಆದೇಶ

Update: 2020-09-06 16:45 GMT

ಹೊಸದಿಲ್ಲಿ,ಸೆ.6: 2002ರ ಗುಜರಾತ್ ಹಿಂಸಾಚಾರದಲ್ಲಿ  ಮೂವರು ಬ್ರಿಟಿಷ್ ಪ್ರಜೆಗಳ ಹತ್ಯೆಗಾಗಿ 20 ಕೋ.ರೂ.ಗಳ ಪರಿಹಾರ ಕೋರಿ ಹೂಡಲಾಗಿರುವ ಸಿವಿಲ್ ಮೊಕದ್ದಮೆಯಿಂದ ನರೇಂದ್ರ ಮೋದಿಯವರ ಹೆಸರನ್ನು ತೆಗೆಯುವಂತೆ ಗುಜರಾತಿನ ಸಬರಕಾಂತಾ ಜಿಲ್ಲೆಯ ಸಿವಿಲ್ ನ್ಯಾಯಾಲಯವೊಂದು ಆದೇಶಿಸಿದೆ.

ಪ್ರಧಾನಿ ಮೋದಿಯವರು ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದರು ಮತ್ತು ರಾಜ್ಯ ಆಡಳಿತ ಯಂತ್ರದ ಮುಖ್ಯಸ್ಥರಾಗಿ ಸಂವಿಧಾನಾತ್ಮಕವಾಗಿ, ಶಾಸನಬದ್ಧವಾಗಿ ಮತ್ತು ವೈಯಕ್ತಿಕವಾಗಿ ದಂಗೆ ಘಟನೆಗಳಿಗೆ ಹೊಣೆಯಾಗಿದ್ದಾರೆ ಎಂದು ಬ್ರಿಟಿಷ್ ಪ್ರಜೆ ಶಮೀಮಾ ದಾವೂದ್ ಮತ್ತು ಇತರರು 2004ರಲ್ಲಿ ದಾಖಲಿಸಿದ್ದ ಮೊಕದ್ದಮೆಯಲ್ಲಿ ವಾದಿಸಿದ್ದರು. ಪ್ರಕರಣದಲ್ಲಿ ಮೋದಿಯವರನ್ನು ನಂ.1 ಪ್ರತಿವಾದಿ ಮತ್ತು ಗುಜರಾತ್ ಸರಕಾರವನ್ನು ನಂ.8 ಪ್ರತಿವಾದಿಗಳನ್ನಾಗಿಸಲಾಗಿತ್ತು.

ವಾದಿಗಳು ಮಾಡಿರುವ ಆರೋಪಗಳು ಸಾರ್ವತ್ರಿಕ ಮತ್ತು ಅಸ್ಪಷ್ಟವಾಗಿವೆ ಎಂದು ತನ್ನ ಆದೇಶದಲ್ಲಿ ಹೇಳಿರುವ ನ್ಯಾ.ಎಸ್.ಕೆ.ಗಾಧಾವಿ ಅವರು, ಅಪರಾಧ ಸ್ಥಳದಲ್ಲಿ ಮೋದಿಯವರು ಇದ್ದರು ಎನ್ನುವುದಕ್ಕೆ ಅಥವಾ ಘಟನೆಯಲ್ಲಿ ಅವರು ನೇರವಾಗಿ ಅಥವಾ ಪರೋಕ್ಷವಾಗಿ ಪಾಲ್ಗೊಂಡಿದ್ದರು ಎನ್ನುವುದಕ್ಕೆ ಅಥವಾ ಅವರು ನಿರ್ದಿಷ್ಟ ಪಾತ್ರ ವಹಿಸಿದ್ದರು ಎನ್ನುವುದಕ್ಕೆ ಒಂದೇ ಒಂದು ಆಧಾರವಿಲ್ಲ ಎಂದಿದ್ದಾರೆ.ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಮೋದಿ ಪರವಾಗಿ ನ್ಯಾಯವಾದಿ ಎಸ್.ಎಸ್.ಶಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಆಗ್ರಾ ಮತ್ತು ಜೈಪುರಗಳಿಗೆ ಭೇಟಿ ನೀಡಿದ್ದ ದಾವೂದ್ ಸಂಬಂಧಿಗಳಾದ ಸಯೀದ್ ದಾವೂದ್, ಶಕೀಲ್ ದಾವೂದ್ ಮತ್ತು ಮುಹಮ್ಮದ್ ಅಸ್ವಾತ್ ಅವರು 2002,ಫೆ.28ರಂದು ನವಸಾರಿ ಜಿಲ್ಲೆಯಲ್ಲಿನ ತಮ್ಮ ಸ್ವಗ್ರಾಮ ಲಾಜಪುರಕ್ಕೆ ಮರಳುತ್ತಿದ್ದಾಗ ರಾ.ಹೆ.8ರಲ್ಲಿ ಗುಂಪೊಂದು ಅವರನ್ನು ಹತ್ಯೆಗೈದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News