ದ.ಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಬಹರೈನ್ ಬಳಗದಿಂದ ಕಿಟ್ ವಿತರಣೆ
ಬೆಳ್ತಂಗಡಿ: ನಮಗೆ ಭಗವಂತ ಕೊಟ್ಟ ಅದಾಯದಲ್ಲಿ ಒಂದಂಶವನ್ನು ಸಮಾಜದಲ್ಲಿ ಅಶಕ್ತರಿಗೆ ದಾನ ನೀಡುವುದು ಸೇವೆಯಲ್ಲ. ಅದು ಉಳ್ಳವರ ಸಾಮಾಜಿಕ ಜವಾಬ್ಧಾರಿ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ದಕ್ಷಿಣ ಕನ್ನಡ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಬಹರೈನ್ ವತಿಯಿಂದ ಸೆ. 6 ರಂದು ಶ್ರೀ ಗುರುದೇವ ಕಾಲೇಜು ಬೆಳ್ತಂಗಡಿ ಕ್ಯಾಂಪಸ್‌ನಲ್ಲಿ ನಡೆದ ಅರ್ಹ ಸರ್ವಧರ್ಮೀಯ 160 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ತಾ. ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ದುಆ ನೆರವೇರಿಸಿರು. ಕಾರ್ಯಕ್ರಮದ ಉದ್ಘಾಟನೆಯನ್ನು ಉಮ್ಮರ್ ಕುಂಞಿ ಮುಸ್ಲಿಯಾರ್ ನೆರವೇರಿಸಿದರು.
ಸಮಾರಂಭದಲ್ಲಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಬಹರೈನ್ ಸಮಿತಿ ಉಪಾಧ್ಯಕ್ಷ ಉಮರ್ ಸಾಹೇಬ್, ಕಾರ್ಯಕ್ರಮ ಸಂಯೋಜಕ ಮುಬಾರಕ್ ಬಾರ್ಕೂರು, ಅನಿವಾಸಿ ಭಾರತೀಯ ಕರ್ನಾಟಕ ಫಾರಂ ಬಹರೈನ್ ಘಟಕದ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ, ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಇರ್ಷಾದ್, ಮಾಚಾರು ಜಮಾಅತ್ ಗೌರವಾಧ್ಯಕ್ಷ ಬಿ.ಎ ಹಂಝ ಮೊದಲಾದ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಗುರುದೇವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಬಿ.ಎ ಶಮೀವುಲ್ಲ ಪ್ರಸ್ತಾವನೆಗೈದು ಸ್ವಾಗತಿಸಿದರು. ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಸರ್ವ ಧರ್ಮೀಯ ಆಯ್ದ 160 ಕುಟುಂಬಗಳಿಗೆ ತಲಾ ಎರಡು ಸಾವಿರ ರೂ. ಗಳ ವೆಚ್ಚದಲ್ಲಿ ಅಕ್ಕಿ ಸಹಿತ ಅಗತ್ಯ ಸಾಮಾನುಗಳ ಕಿಟ್ಟನ್ನು ವಿತರಿಸಲಾಯಿತು.
ಸನ್ಮಾನ:
ಇದೇ ವೇಳೆ ಪ್ರಸ್ತುತ ಸಾಲಿನ ರಾಷ್ಟ್ರ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಕೊಯ್ಯೂರು, ತಾಲೂಕಿನಲ್ಲಿ 5 ಬಾರಿ ಶಾಸಕರಾಗಿ ಜನಪ್ರಿಯತೆ ಗಳಿಸಿದ ಮಾಜಿ ಶಾಸಕ ವಸಂತ ಬಂಗೇರ ಅವರನ್ನು ದ.ಕ ಮುಸ್ಲಿಂ ವೆಲ್ಪೇರ್ ಅಸೋಸಿಯೇಷನ್ ಬಹರೈನ್ ವತಿಯಿಂದ ಸನ್ಮಾನಿಸಲಾಯಿತು.