ಮೋದಿ ಭಾಷಣಗಳಿಗೆ ಮುಂದುವರಿದ ಡಿಸ್‌ಲೈಕ್ !

Update: 2020-09-07 07:06 GMT

ಹೊಸದಿಲ್ಲಿ, ಸೆ.7: ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಸೋಮವಾರ ಆಯೋಜಿಸಿದ್ದ ರಾಜ್ಯಪಾಲರುಗಳ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ

ಭಾಷಣಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕಾರ್ಯಕ್ರಮ ಸೋಮವಾರ ಬೆಳಗ್ಗೆ ಲೈವ್ ಪ್ರಸಾರವಾಗಿತ್ತು. ಪ್ರಸಾರಗೊಂಡ 96 ನಿಮಿಷಗಳಲ್ಲಿ 16 ಸಾವಿರ ಮಂದಿ ಇದಕ್ಕೆ ‘ಡಿಸ್‌ಲೈಕ್’ಗಳು ಮಾಡಿದ್ದರೆ, 3,200 ಮಂದಿ ಮಾತ್ರ ‘ಲೈಕ್’ ಮಾಡಿದ್ದಾರೆ. ಈ ಕಾರ್ಯಕ್ರಮದ ವೀಡಿಯೋಗೆ ಡಿಸ್‌ಲೈಕ್‌ಗಳ ಪ್ರಮಾಣ ಇನ್ನೂ ಹೆಚ್ಚುತ್ತಲೇ ಇದೆ.

ಪ್ರಧಾನಿ ಮೋದಿಯವರ ‘ಮನ್ ಕೀ ಬಾತ್’ ಬಾನುಲಿ ಕಾರ್ಯಕ್ರಮದ ಆಗಸ್ಟ್ 30ರ ಆವೃತ್ತಿಗೂ ಇದೇರೀತಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಇದರ ವೀಡಿಯೊವನ್ನು ಸುಮಾರು 10 ಲಕ್ಷ ಮಂದಿ ‘ಡಿಸ್‌ಲೈಕ್’ ಮಾಡಿದ್ದರೆ, 2.3 ಲಕ್ಷ ಮಂದಿ ಮಾತ್ರ ಲೈಕ್ ಮಾಡಿದ್ದರು.

ಬಹುಚರ್ಚಿತ ಜೆಇಇ-ನೀಟ್ ಪರೀಕ್ಷೆಗಳನ್ನು ನಡೆಸುವ ಕುರಿತಂತೆ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿಲ್ಲ ಎಂದು ಈ ಹಿಂದೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಬಿಜೆಪಿಯ ಅಧಿಕೃತ ಯುಟ್ಯೂಬ್ ಚಾನೆಲ್‍ ನಲ್ಲಿ ಅಪ್‍ಲೋಡ್ ಮಾಡಲಾಗಿದ್ದ ಪ್ರಧಾನಿಯ ಮನ್ ಕಿ ಬಾತ್ ಆಗಸ್ಟ್ ತಿಂಗಳ  ಕಾರ್ಯಕ್ರಮದ ವೀಡಿಯೋಗೆ 10 ಲಕ್ಷ ಮಂದಿ ಡಿಸ್ ಲೈಕ್ ಮಾಡಿದ್ದರು.

ಪ್ರಧಾನಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ಪರೀಕ್ಷೆಗಳ ವಿಚಾರ ಎತ್ತುತ್ತಾರೆಂದು ಬಹುತೇಕ ಮಂದಿ ಕಾರ್ಯಕ್ರಮ ಪ್ರಸಾರವಾಗುವ ಮುಂಚೆ  ನಿರೀಕ್ಷೆಗಳನ್ನು  ಇಟ್ಟುಕೊಂಡಿದ್ದರು. ಆದರೆ ಓಣಂನಿಂದ ಹಿಡಿದು ಭಾರತದ ಆಟಿಕೆ ಉದ್ಯಮದ ಕುರಿತು ಪ್ರಸ್ತಾಪಿಸಿದ ಮೋದಿ ನೀಟ್-ಜೆಇಇ ಪರೀಕ್ಷೆಯ ಗೊಂದಲದ ಕುರಿತು ಚಕಾರವೆತ್ತದೇ ಇದ್ದ ನಂತರ #Mann_Ki_Nahi_Student_Ki_Baat ಹ್ಯಾಶ್ ಟ್ಯಾಗ್ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News