ಹೆಬ್ರಿ: ಮಂಗಗಳ ಸಾಮೂಹಿಕ ಹತ್ಯೆ; ಗೋಣಿಚೀಲಗಳಲ್ಲಿ ಕಳೇಬರಗಳು ಪತ್ತೆ
ಹೆಬ್ರಿ, ಸೆ.7: ಮಂಗಗಳನ್ನು ಸಾಮೂಹಿಕವಾಗಿ ಹತ್ಯೆಗೈದು ಸೋಮೇಶ್ವರ- ಮಡಾಮಕ್ಕಿ ರಸ್ತೆಯ ನಾಡ್ಪಾಲು ಎಂಬಲ್ಲಿ ಎಸೆದಿರುವ ಅಮಾನವೀಯ ಘಟನೆ ಸೆ.6ರಂದು ಸಂಜೆ ಬೆಳಕಿಗೆ ಬಂದಿದೆ.
ಈ ಮಂಗಗಳನ್ನು ಬೇರೆ ಪ್ರದೇಶದಲ್ಲಿ ಸಾಯಿಸಿ ಗೋಣಿ ಚೀಲಗಳಲ್ಲಿ ತುಂಬಿಸಿ ತಂದು ನಾಡ್ಪಾಲು ರಸ್ತೆ ಬದಿಯಲ್ಲಿ ಎಸೆದಿರುವುದು ಕಂಡುಬಂದಿದೆ. ಈ ಕೃತ್ಯ ಎರಡು ದಿನಗಳ ಹಿಂದೆ ನಡೆದಿರಬಹುದೆಂದು ಶಂಕಿಸಲಾಗಿದೆ. ಇದರಿಂದ ಮಂಗಗಳ ಕಳೇಬರಗಳು ಕೊಳೆತು ಹೋಗಿವೆ ಎನ್ನಲಾಗಿದೆ.
ಗೋಣಿಚೀಲಗಳನ್ನು ಎಸೆಯುವ ರಭಸಕ್ಕೆ ಕೆಲವು ಮಂಗಗಳ ಕಳೇಬರಗಳು ರಸ್ತೆ ಬದಿಯಲ್ಲಿ ಬಿದ್ದಿದ್ದರೆ, ಮತ್ತೆ ಹಲವು ಗೋಣಿಚೀಲಗಳ ಒಳಗೆ ಇವೆ. ಇದರಲ್ಲಿ ತಾಯಿ ಮಂಗ ಮತ್ತು ಮರಿ ಮಂಗ ಕೂಡ ಸೇರಿವೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಇಂದು ಬೆಳಗ್ಗೆ ಸ್ಥಳಕ್ಕೆ ವನ್ಯಜೀವಿ ವಿಭಾಗದ ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್ ತೆರಳಿ ಪರಿಶೀಲನೆ ನಡೆಸಿದ್ದಾರೆ. ‘ಪಶು ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಮಾಹಿತಿ ನೀಡಲಾಗಿದ್ದು, ಇವುಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅನಿಲ್ ತಿಳಿಸಿದ್ದಾರೆ. ಸ್ಥಳಕ್ಕೆ ಕಾರ್ಕಳ ವನ್ಯಜೀವಿ ವಿಭಾಗದ ಉಪವಲಯ ಅರಣ್ಯಾಧಿಕಾರಿ ರುದ್ರನ್ ಕೂಡ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
‘ಇಂತಹ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಬೇಕು ಇನ್ನುಮುಂದೆ ಮೂಕ ಪ್ರಾಣಿಗಳ ಮೇಲೆ ನಡೆಯುವ ದೌರ್ಜನ್ಯ ನಿಲ್ಲಬೇಕು. ಮೂಕಪ್ರಾಣಿಗಳ ರಕ್ಷಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು’ ಎಂದು ಪ್ರಾಣಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ.