ಕೊಯಮತ್ತೂರು: ಕಟ್ಟಡ ಕುಸಿತ, ಇಬ್ಬರು ಮೃತ್ಯು
Update: 2020-09-07 12:36 IST
ಕೊಯಮತ್ತೂರು, ಸೆ.7: ಭಾರೀ ಮಳೆಯಿಂದಾಗಿ ರವಿವಾರ ರಾತ್ರಿ ಕಟ್ಟಡ ಕುಸಿದಿದ್ದು, ಅವಶೇಷಗಳಡಿ ಸಿಲುಕಿ ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕೊಯಮತ್ತೂರಿನ ಚತುರ್ವೇದಿ ರಸ್ತೆಯಲ್ಲಿ ಕಟ್ಟಡವೊಂದು ರವಿವಾರ ರಾತ್ರಿ 10:30ಕ್ಕೆ ಕುಸಿದಿದೆ. ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅವಶೇಷಗಳಡಿ ಸಿಲುಕಿದ್ದ ಐವರನ್ನು ರಕ್ಷಿಸಲಾಗಿದೆ. ಆದರೆ, ಮಹಿಳೆ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಆರು ವರ್ಷದ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿದ್ದು, ಇತರರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.