×
Ad

ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಎಡನೀರು ಸ್ವಾಮೀಜಿಯ ಒಂದು ಅಪೀಲು

Update: 2020-09-07 14:38 IST

ಹೊಸದಿಲ್ಲಿ: ಧಾರ್ಮಿಕ ಸ್ಥಳಗಳ ನಿರ್ವಹಣೆಯನ್ನು ನಿಯಂತ್ರಿಸುವ ಸಲುವಾಗಿ 1969 ಹಾಗೂ 1970ರ ಕೇರಳ ಭೂಸುಧಾರಣಾ ಕಾಯಿದೆಗಳ ಜಾರಿಯನ್ನು ವಿರೋಧಿಸಿ ಆಗ ಕೇವಲ 30 ವರ್ಷದವರಾಗಿದ್ದ ಎಡನೀರು ಮಠದ ಶ್ರೀ ಕೇಶವಾನಂದ ಭಾರತ ಸ್ವಾಮೀಜಿ 1970ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದಾಗಿ ಸಂವಿಧಾನವನ್ನು ತಿದ್ದುಪಡಿಗೊಳಿಸಲು ಸಂಸತ್ತಿಗೆ ಇರುವ ಹಕ್ಕನ್ನು ಮೊಟಕುಗೊಳಿಸುವ ಹಾಗೂ ಯಾವುದೇ ತಿದ್ದುಪಡಿಯನ್ನು ಪರಾಮರ್ಶಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ಒದಗಿಸುವ ಮೂಲ ಸ್ವರೂಪ ಸಿದ್ಧಾಂತ ಅಸ್ತಿತ್ವಕ್ಕೆ ಬಂದಿತ್ತು.

ಈ ಪ್ರಕರಣಕ್ಕೆ ಹಲವು ಪ್ರಥಮಗಳ ಶ್ರೇಯವಿದೆ. ಹದಿಮೂರು ಮಂದಿ ನ್ಯಾಯಾಧೀಶರುಗಳಿದ್ದ ಸುಪ್ರೀಂ ಕೋರ್ಟಿನ ಅತ್ಯಂತ ವಿಸ್ತೃತ ಪೀಠ ಗರಿಷ್ಠ 68 ದಿನಗಳ ಕಾಲ ವಿಚಾರಣೆ ನಡೆಸಿ 703 ಪುಟಗಳ ತೀರ್ಪು ನೀಡಿತ್ತು. ಅಕ್ಟೋಬರ್ 31, 1972ರಂದು ಆರಂಭಗೊಂಡ ವಿಚಾರಣೆ ಮಾರ್ಚ್ 23, 1973ರಂದು ಅಂತ್ಯಗೊಂಡಿತ್ತು.

ಸಂವಿಧಾನದ ಯಾವುದೇ ಅಂಶವನ್ನು ತಿದ್ದುಪಡಿಗೊಳಿಸುವ ಅಧಿಕಾರ ಸಂಸತ್ತಿಗಿದೆ ಎಂಬ ಸಿದ್ಧಾಂತವು ಅತ್ಯಂತ ಕನಿಷ್ಠ ಬಹುಮತ 7:6 ಆಧಾರದಲ್ಲಿ ಅಂತ್ಯಗೊಂಡಿತ್ತು. ಈ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎಸ್ ಎಂ ಸಿಖ್ರಿ ಹಾಗೂ ನ್ಯಾಯಮೂರ್ತಿ ಎಚ್ ಆರ್ ಖನ್ನಾ ನೇತೃತ್ವದ ಪೀಠ ನೀಡಿತ್ತು.

ಸಂಸತ್ತಿಗೆ 368ನೇ ವಿಧಿ ಅನ್ವಯ ಸಂವಿಧಾನ ತಿದ್ದುಪಡಿಗೊಳಿಸುವ ಅಧಿಕಾರವಿದೆಯಾದರೂ ಅದರ ಮೂಲ ಸ್ವರೂಪವನ್ನು ಬದಲಾಯಿಸುವ ಅಧಿಕಾರವಿಲ್ಲವೆಂದು ಈ ತೀರ್ಪು ಹೇಳಿತ್ತು. ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ತಿದ್ದುಪಡಿಗೊಳಿಸಬಹುದಾದರೂ ಸಂವಿಧಾನದ ಮೂಲಸ್ವರೂಪಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂಬುದನ್ನು ಪರಾಮರ್ಶಿಸಲು ನ್ಯಾಯಾಲಯ ತಿದ್ದುಪಡಿಯನ್ನು ಪರಿಶೀಲಿಸಬಹುದು ಎಂದು ತೀರ್ಪು ಹೇಳಿತ್ತು.

ಕೇಶವಾನಂದ ಭಾರತಿ ಸ್ವಾಮಿ ಪರ ಈ ಪ್ರಕರಣದಲ್ಲಿ ಖ್ಯಾತ ವಕೀಲರಾದ ನಾನಿ ಪಾಲ್ಖಿವಾಲ ವಾದಿಸಿದ್ದರು.

13 ಮಂದಿ ನ್ಯಾಯಾಧೀಶರ ಪೀಠ 11 ಪ್ರತ್ಯೇಕ ತೀರ್ಪುಗಳನ್ನು ನೀಡಿತ್ತಲ್ಲದೆ, ಕೆಲವು ಅಂಶಗಳಲ್ಲಿ ಸಹಮತ ಹೊಂದಿದ್ದರೆ ಇನ್ನು ಕೆಲವು ಅಂಶಗಳ ಬಗ್ಗೆ ಈ ನ್ಯಾಯಾಧೀಶರು ಸಹಮತ ಹೊಂದಿರಲಿಲ್ಲ.

ಆದರೆ ಮೂಲ ಸ್ವರೂಪ ಸಿದ್ಧಾಂತವನ್ನು 13 ನ್ಯಾಯಾಧೀಶರುಗಳ ಪೈಕಿ ಏಳು  ನ್ಯಾಯಾಧೀಶರು ಬೆಂಬಲಿಸಿದ್ದರು. ಇದು ಮುಂದೆ ಹಲವಾರು ಸಾಂವಿಧಾನಿಕ ತಿದ್ದುಪಡಿಗಳ ರದ್ದುಗೊಳಿಸುವಿಕೆಗೆ ಕಾರಣವಾಯಿತು. ತೀರಾ ಇತ್ತೀಚಿಗಿನ ಪ್ರಕರಣದಲ್ಲಿ ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರುಗಳ ನೇಮಕಕ್ಕಾಗಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ರಚಿಸಲು ಅನುವಾಗುವ ಸಾಂವಿಧಾನಿಕ ತಿದ್ದುಪಡಿಯನ್ನೂ ರದ್ದುಗೊಳಿಸಲಾಗಿರುವುದನ್ನು ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News