ವಿಧಾನಸಭೆ ಚುನಾವಣೆ: ಬಿಹಾರದಲ್ಲಿ ಬಿಜೆಪಿಯ ಪೋಸ್ಟರ್, ಸ್ಟಿಕ್ಕರ್, ಮಾಸ್ಕ್ ಗಳಲ್ಲಿ ಸುಶಾಂತ್ ಫೋಟೊ

Update: 2020-09-07 09:20 GMT

ಪಾಟ್ನಾ: ಬಿಹಾರ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯ ಬಿಜೆಪಿ ಘಟಕ ಹೊರತಂದಿರುವ ಪೋಸ್ಟರ್ ಗಳು, ಬ್ಯಾನರ್ ಗಳು, ಸ್ಟಿಕ್ಕರ್ ಗಳು ಹಾಗೂ ಮಾಸ್ಕ್ ‍ಗಳಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಚಿತ್ರಗಳಿರುವುದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ‘ಜಸ್ಟಿಸ್ ಫಾರ್ ಸುಶಾಂತ್’ ಎಂದು ಬರೆಯಲಾಗಿರುವ ಪೋಸ್ಟರ್ ‍ಗಳೂ ರಾಜ್ಯದ ಹಲವೆಡೆ ಕಾಣಿಸಿಕೊಂಡಿವೆ.

ಬಿಜೆಪಿಯ ಸಾಂಸ್ಕೃತಿಕ ಘಟಕ -ಕಲಾ ಸಂಸ್ಕೃತಿ ಮಂಚ್ ಹೊರತಂದಿರುವ ಸ್ಟಿಕ್ಕರ್ ಗಳು ಹಾಗೂ ಮಾಸ್ಕ್ ಗಳಲ್ಲೂ ಸುಶಾಂತ್ ಚಿತ್ರವಿದ್ದು “ನಾ ಭೂಲೇ ಹೈ, ನಾ ಭೂಲ್ನೆ ದೇಂಗೆ'' (ನಾವು ಮರೆತಿಲ್ಲ, ಮರೆಯಲೂ ಬಿಡುವುದಿಲ್ಲ) ಎಂಬ ಸಂದೇಶಗಳೂ ಇವುಗಳಲ್ಲಿವೆ.

ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರ ಸುಶಾಂತ್ ಸಾವು ಪ್ರಕರಣದ ಸಿಬಿಐ ತನಿಖೆಯ ಹಿಂದೆ ಹೇಗೆ ಪ್ರಮುಖ ಪಾತ್ರ ವಹಿಸಿತ್ತು ಎಂಬ ಸಂದೇಶವನ್ನು ಜನರಿಗೆ ನೀಡುವ ಉದ್ದೇಶ ಈ ಕ್ರಮದ ಹಿಂದಿದೆಯೆನ್ನಲಾಗಿದೆ.

“ಇದು ರಾಜಕೀಯ ವಿಚಾರವಲ್ಲ, ಬದಲು ನನ್ನ ಹೃದಯಕ್ಕೆ ಹತ್ತಿರದ ವಿಚಾರ. ನಾವು ಸಿಬಿಐ ತನಿಖೆಗೆ ಆಗ್ರಹಿಸಿದ್ದೆವು.  ಸುಶಾಂತ್ ಗೆ ನ್ಯಾಯ ಕೋರಿ  ನಾವು ಸಚಿವರುಗಳಿಗೆ ಪತ್ರಗಳನ್ನೂ ಕಳುಹಿಸಿದ್ದೆವು. ಅವರೊಬ್ಬ ಕಲಾವಿದರಾಗಿದ್ದರು, ನಾನು ಕೂಡ” ಎಂದು ಬಿಜೆಪಿ ಕಲಾ ಸಂಸ್ಕೃತಿ ಮಂಚ್ ನ ರಾಜ್ಯ ಸಂಘಟಕ ವರುಣ್ ಕುಮಾರ್ ಸಿಂಗ್ ಹೇಳುತ್ತಾರೆ.

ತನ್ನ ರಾಜಕೀಯ ಅಜೆಂಡಾಕ್ಕಾಗಿ ಬಿಜೆಪಿ ಸುಶಾಂತ್ ಪ್ರಕರಣವನ್ನು ಬಳಸುತ್ತಿದೆ ಎಂದು ವಿಪಕ್ಷಗಳಾದ ಆರ್‍ ಜೆಡಿ ಹಾಗೂ ಕಾಂಗ್ರೆಸ್  ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News