ನಕಲಿ ಟ್ವಿಟರ್ ಖಾತೆಗಳ ಮೂಲಕ ಬಿಜೆಪಿ ಐಟಿ ಸೆಲ್ ಸದಸ್ಯರಿಂದ ಅಪಪ್ರಚಾರ: ಸುಬ್ರಮಣಿಯನ್ ಸ್ವಾಮಿ ಆರೋಪ

Update: 2020-09-07 12:24 GMT

ಹೊಸದಿಲ್ಲಿ: ನಕಲಿ ಟ್ವೀಟ್ ಗಳನ್ನು ಬಳಸಿ ತಮ್ಮ ವಿರುದ್ಧ ಅಭಿಯಾನವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ನಡೆಸುತ್ತಿದ್ದಾರೆಂದು ಆರೋಪಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಬಿಜೆಪಿ ತನ್ನ ಐಟಿ ಘಟಕದ ಸದಸ್ಯರನ್ನು ಉಚ್ಛಾಟಿಸಬೇಕೆಂದೂ ಹೇಳಿದ್ದಾರೆ.

ಆದರೆ ಯಾವ ವಿಚಾರ ಮುಂದಿಟ್ಟುಕೊಂಡು ತಮ್ಮ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂಬ ವಿಚಾರವನ್ನು ಮಾತ್ರ ಅವರು ಬಹಿರಂಗಪಡಿಸಿಲ್ಲ.

“ಬಿಜೆಪಿ ಐಟಿ ಘಟಕದ ಕೆಲ ಸದಸ್ಯರು ನಕಲಿ ಐಡಿ ಟ್ವೀಟ್ ಗಳನ್ನು ಬಳಸಿ ನನ್ನ ಮೇಲೆ ವೈಯಕ್ತಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ಐಟಿ ಘಟಕದ ಕಾರ್ಯಗಳಿಗೆ ಬಿಜೆಪಿಯನ್ನು ಹೊಣೆಯಾಗಿಸಲು ಸಾಧ್ಯವಾಗದಂತೆ ನನ್ನ ಫಾಲೋವರ್ಸ್ ಏನಾದರೂ ಟ್ವೀಟ್ ಗಳನ್ನು ಮಾಡಿದರೆ ಅದಕ್ಕೆ ನಾನು ಜವಾಬ್ದಾರನಲ್ಲ” ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ದಾಳಿಗಳನ್ನು ನಿರ್ಲಕ್ಷ್ಯಿಸುವಂತೆ ಟ್ವಿಟ್ಟರಿಗರೊಬ್ಬರು ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸ್ವಾಮಿ, “ಬಿಜೆಪಿ ತನ್ನ ಐಟಿ ಸೆಲ್ ಸದಸ್ಯರನ್ನು ಉಚ್ಛಾಟಿಸಬೇಕು., ನಾನು ಆ ಟ್ವೀಟ್ ಗಳನ್ನು ನಿರ್ಲಕ್ಷ್ಯಿಸುತ್ತೇನೆ, ಆದರೆ ಬಿಜೆಪಿ ಅವರನ್ನು ಕಿತ್ತೊಗೆಯಬೇಕು, ನಾವು ಮರ್ಯಾದ ಪುರುಷೋತ್ತಮರ ಪಕ್ಷ, ರಾವಣ ಅಥವಾ ದುಷ್ಯಾಸನರ ಪಕ್ಷವಲ್ಲ'' ಎಂದು ಹೇಳಿದ್ದಾರೆ.

ಮಾಳವಿಯ ಅವರನ್ನು ಅಣಕಿಸಿ ಹಲವರು ಮಾಡಿರುವ ಟ್ವೀಟ್ ಗಳನ್ನು ರಿಟ್ವೀಟ್ ಮಾಡಿರುವ ಸ್ವಾಮಿ, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಈ ಕುರಿತು ಗಮನ ಹರಿಸಬೇಕೆಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News