×
Ad

ಬೈಂದೂರು: ಭಾಗಶ: ಕುಸಿದ ಕಾಲ್ತೋಡು ಕಾಲುಸಂಕ

Update: 2020-09-07 19:20 IST

ಉಡುಪಿ, ಸೆ. 7: ರವಿವಾರ ಸಂಜೆಯ ಬಳಿಕ ಸಿಡಿಲು-ಗುಡುಗಿನೊಂದಿಗೆ ಸುರಿದ ಭಾರೀ ಗಾಳಿ-ಮಳೆಗೆ ಉಡುಪಿ ಜಿಲ್ಲೆಯ ನಾನಾ ಕಡೆಯಲ್ಲಿ ಹತ್ತಾರು ಮನೆ ಹಾಗೂ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಭಾರೀ ಪ್ರಮಾಣದ ಹಾನಿಯಾದ ಬಗ್ಗೆ ವರದಿಗಳು ಬಂದಿವೆ.

ಬೈಂದೂರು ತಾಲೂಕಿನಾದ್ಯಂತ ನಿನ್ನೆ ಸಂಜೆ ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಕಾಲ್ತೋಡು ಗ್ರಾಮದಲ್ಲಿ ಕಾಲುಸಂಕದ ಒಂದು ಬದಿ ಭಾರೀ ಮಳೆಗೆ ಕುಸಿದಿದ್ದು, ಮಣ್ಣು ಹಾಗೂ ಕಾಂಕ್ರಿಟ್ ಕೊಚ್ಚಿಕೊಂಡು ಹೋಗಿದೆ. ಆದರೆ ಇಲ್ಲಿ ಭಾರೀ ವಾಹನಗಳ ಸಂಚಾರ ವಿರಳವಾಗಿರುವುದರಿಂದ ಜನಸಂಚಾರಕ್ಕೆ ಹೆಚ್ಚಿನ ತೊಂದರೆ ಉಂಟಾಗಿಲ್ಲ. ಆದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಬಸಪ್ಪ ಪೂಜಾರ್ ತಿಳಿಸಿದ್ದಾರೆ.

ಕಾಲ್ತೋಡು ಗ್ರಾಮದ ನದಿ ತೀರದ ಮನೆಗಳಿಗೆ ನೀರು ನುಗಿದ್ದು ಹಾನಿ ಉಂಟಾಗಿದೆ. ಇಲ್ಲಿನ ನಾಗಯ್ಯ ಪೂಜಾರಿ ಎಂಬವರಿಗೆ ಸೇರಿದ ದನ ಗಳು ನಾಪತ್ತೆಯಾಗಿರುವ ವರದಿ ಬಂದಿದೆ. ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದವರು ತಿಳಿಸಿದರು.

ಯಳಜಿತ್ ಗ್ರಾಮದಲ್ಲೂ ಒಂದು ಮನೆಗೆ ನೀರು ನುಗ್ಗಿದೆ. ಹಲವು ಕಡೆಗಳಲ್ಲಿ ತೋಟದಲ್ಲಿದ್ದ ನೂರಾರು ಬಾಳೆಗಿಡ, ಅಡಿಕೆ ಮರಗಳು ಧರೆಗೆ ಉರುಳಿದ್ದು, ಕಬ್ಬಿನ ತೋಟಕ್ಕೂ ಅಪಾರ ಹಾನಿ ಸಂಭವಿಸಿದೆ. ಗಾಳಿ-ಮಳೆಗೆ ಗದ್ದೆಯಲ್ಲಿದ್ದ ಭತ್ತಗಿಡಗಳು ನೆಲಕಚ್ಚಿವೆ. ಯಳಜಿತ್‌ನ ದೇವಪ್ಪ ಎಂಬವರ ಮನೆಗೆ ನೀರು ನುಗಿದ್ದು, ಆವರಣಗೋಡೆ ಕುಸಿದಿದೆ. ಲಕ್ಷಾಂತರ ರೂ. ನಷ್ಟದ ಅಂದಾಜು ಮಾಡಲಾಗಿದೆ.

ಯಡ್ತರೆ ಗ್ರಾಮದ ಚಿತ್ಕಲ್‌ನ ಬೆನ್ನಿ ಎಂಬವರ ಕೋಳಿಫಾರ್ಮ್‌ಗೂ ಮಳೆ ನೀರು ನುಗ್ಗಿದ್ದು ಸಾವಿರಾರು ಕೋಳಿಮರಿಗಳು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ಇಲ್ಲಿ ಐದು ಲಕ್ಷ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಮಾಹಿತಿ ದೊರಕಿದೆ. ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಉಪ್ಪುಂದ ಗ್ರಾಮದ ಗಿರಿಜಾ ಮಡಿವಾಳ ಎಂಬವರ ಮನೆಗೆ ಸಿಡಿಲು ಬಡಿದು ಲಕ್ಷಾಂತರ ರೂ.ಗಳ ಹಾನಿ ಸಂಭವಿಸಿದೆ. ಮನೆಯಲ್ಲಿದ್ದ ಟಿವಿ ಸೇರಿದಂತೆ ವಿದ್ಯುತ್ ಉಪಕರಣಗಳು, ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.

ಕಾರ್ಕಳ: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಮುಕುಂದ ನಾಯಕ್ ಎಂಬವರ ಮನೆ ಗಾಳಿ ಮಳೆಗೆ ಸಂಪೂರ್ಣ ಹಾನಿಗೊಳಗಾಗಿದೆ. ಸುಮಾರು ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ ಎಂದು ಕಾರ್ಕಳ ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಪಡುಬಿದ್ರಿ ಸಮೀಪದ ಹೆಜಮಾಡಿಯ ವನಜ ಎಂಬವರ ಮನೆಗೆ ನಿನ್ನೆ ಸಂಜೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು, ಮನೆಯಲ್ಲಿದ್ದ ಕರುವೊಂದು ಸಿಡಿಲು ಬಡಿದು ಮೃತಪಟ್ಟಿದೆ. ಸುಮಾರು ಎರಡು ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News