ಟೋಲ್ಗೇಟುಗಳಲ್ಲಿ ಪ್ರತಿದಿನ ಹಗಲು ದರೋಡೆ: ಜೆಡಿಎಸ್ ಆರೋಪ
ಉಡುಪಿ, ಸೆ.7: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೇವಲ 93 ಕಿಲೋ ಮೀಟರ್ ಅಂತರದಲ್ಲಿ ಇರುವ ಐದು ಟೋಲ್ ಗೇಟುಗಳಲ್ಲಿ ದಿನನಿತ್ಯ ಹಗಲು ದರೋಡೆ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಆರೋಪಿಸಿದೆ.
ಭಾರತ ಸರಕಾರದ ಕಾನೂನು ಪ್ರಕಾರ ರಸ್ತೆ ನಿರ್ವಹಣಾ ಶುಲ್ಕ ಸಂಗ್ರಹಿಸುವ ಟೋಲ್ ಗೇಟುಗಳು 60 ಕಿಲೋ ಮೀಟರ್ ಅಂತರದಲ್ಲಿ ಇರಬಾರದು. ಹಾಗಿದ್ದರೂ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಐದು ಟೋಲ್ ಗೇಟುಗಳು ಎಲ್ಲಾ ವಾಹನ ಚಾಲಕರಿಂದ ಹಣ ಸಂಗ್ರಹ ಮಾಡುತ್ತಿವೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ದೂರಿದ್ದಾರೆ.
ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರಿದ್ದಾರೆ. ಹಾಗಿದ್ದರೂ ಈ ಟೋಲ್‌ಗೇಟ್‌ಗಳಲ್ಲಿ ಹಗಲು ದರೋಡೆ ನಡೆಯುತ್ತಲೇ ಇದೆ. ಕಾಯಿದೆ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಟೋಲ್ ಗೇಟ್ ನಡುವಿನ ಕನಿಷ್ಟ ಅಂತರ 60 ಕಿಲೋ ಮೀಟರ್ ಇರಲೇಬೇಕು. ಆದರೆ ಕರಾವಳಿ ಜಿಲ್ಲೆಗಳಲ್ಲಿ ಹಾದುಹೋಗುವ ಕೇರಳ- ಗೋವಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಲ್ಕು ಟೋಲ್ ಗೇಟುಗಳು ಇವೆ. ಆದುದರಿಂದ ಎನ್‌ಐಟಿಕೆ ಟೋಲ್ ಗೇಟನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕುಂದಾಪುರದ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಅವೈಜ್ಞಾನಿಕ ವಾಗಿ ಕಟಪಾಡಿ, ಅಂಬಲಪಾಡಿಯಲ್ಲಿ ರಸ್ತೆ ನಿರ್ಮಿಸಿ ಅಪಘಾತಕ್ಕೆ ಕಾರಣ ವಾಗಿರುತ್ತದೆ. ಸರ್ವಿಸ್ ರಸ್ತೆ ಕಾಮಗಾರಿ ನಡೆಯಲೇ ಇಲ್ಲ. ಅಪಘಾತ- ಅಪರಾಧಗಳನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುವ ದಾರಿ ದೀಪಗಳಲ್ಲಿ ಸುಮಾರು ಅರ್ಧ ಪ್ರಮಾಣದಷ್ಟು ಬೆಳಗುತ್ತಿಲ್ಲ. ಇದು ನಮ್ಮ ಅವಳಿ ಜಿಲ್ಲೆಗಳ ಅವ್ಯವಸ್ಥೆಯ ಆಗರವಾಗಿದೆ. ಇನ್ನಾದರೂ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಪಂದಿಸಬೇಕು. ಹೆಜಮಾಡಿ ಟೋಲ್ ಗೇಟ್ ನಲ್ಲಿ ನಡೆಯುವ ಗೂಂಡಾ ಸಂಸ್ಕೃತಿಯು ಕೂಡಲೇ ನಿಲ್ಲಬೇಕು ಎಂದು ಅವು ಸರಕಾರವನ್ನು ಒತ್ತಾಯಿಸಿದ್ದಾರೆ.