ರಶ್ಯ ಹಸ್ತಕ್ಷೇಪದಿಂದ ಡೆಮಾಕ್ರಟಿಕ್ ಪಕ್ಷಕ್ಕೆ ಅಧಿಕಾರ ಸಿಗದಿರಬಹುದು: ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್

Update: 2020-09-07 15:35 GMT

ವಾಶಿಂಗ್ಟನ್, ಸೆ. 7: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸುವ ಹಸ್ತಕ್ಷೇಪದಿಂದ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷಕ್ಕೆ ಹಾನಿಯಾಗಬಹುದು ಎಂಬ ಭೀತಿಯನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ರವಿವಾರ ಹೇಳಿದ್ದಾರೆ.

‘‘ಅಮೆರಿಕದಲ್ಲಿ 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿರುವುದು ಸ್ಪಷ್ಟವಾಗಿದೆ’’ ಎಂದು ಸಿಎನ್‌ಎನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದರು.

‘‘ನಾನು ಸೆನೆಟ್ ಗುಪ್ತಚರ ಸಮಿತಿಯಲ್ಲಿದ್ದೇನೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಏನಾಗಿದೆ ಎಂದು ನಾವು ಭಾವಿಸಿದ್ದೇವೆಯೋ ಅದರ ವಿವರವಾದ ವರದಿಗಳನ್ನು ನಾವು ಪ್ರಕಟಿಸಿದ್ದೇವೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲೂ ವಿದೇಶಿ ಹಸ್ತಕ್ಷೇಪ ಇರುತ್ತದೆ ಹಾಗೂ ರಶ್ಯವು ಅದರ ಮುಂಚೂಣಿಯಲ್ಲಿರುತ್ತದೆ’’ ಎಂದು ಕಮಲಾ ಹೇಳಿದರು.

ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪದ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

ರಶ್ಯ ಹಸ್ತಕ್ಷೇಪದಿಂದಾಗಿ ಶ್ವೇತಭವನವು ನಿಮಗೆ ದಕ್ಕದೆ ಹೋಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲಾ, ‘‘ಸೈದ್ಧಾಂತಿಕವಾಗಿ ಹೇಳುವುದಾದರೆ, ಖಂಡಿತವಾಗಿಯೂ ಹೌದು’’ ಎಂದರು.

ಕೊರೋನ ವೈರಸ್ ಸಾಂಕ್ರಾಮಿಕದ ಗಂಭಿೀರತೆಯನ್ನು ಕನಿಷ್ಠಗೊಳಿಸಿದ ಟ್ರಂಪ್: ಕಮಲಾ ಹ್ಯಾರಿಸ್ ಆರೋಪ

ಕೊರೋನ ವೈರಸ್ ನಿರ್ವಹಣೆಯಲ್ಲಿನ ವೈಫಲ್ಯಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಉಪಾಧ್ಯಕ್ಷ ಅಭ್ಯರ್ಥಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್, ಟ್ರಂಪ್ ಸರಕಾರವು ಕೊರೋನ ವೈರಸ್ ಸಾಂಕ್ರಾಮಿಕದ ಗಂಭೀರತೆಯನ್ನು ಕನಿಷ್ಠಗೊಳಿಸಿದೆ ಎಂದು ಹೇಳಿದ್ದಾರೆ.

‘‘ಸಾಂಕ್ರಾಮಿಕದ ಆರಂಭದಿಂದಿಲೂ ಅದನ್ನು ಟ್ರಂಪ್ ‘ಹುಸಿ’ ಎಂಬುದಾಗಿ ಕರೆಯುತ್ತಾ ಬಂದಿದ್ದಾರೆ. ಸಾರ್ವಜನಿಕ ಆರೋಗ್ಯ ಪರಿಣತರ ಧ್ವನಿಯನ್ನು ಅವರು ಹತ್ತಿಕ್ಕಿದ್ದಾರೆ. ಅದರ ಗಂಭೀರತೆಯನ್ನು ಅವರು ಕನಿಷ್ಠಗೊಳಿಸಿದ್ದಾರೆ. ಅವರು ವಿಜ್ಞಾನಿಗಳು ಮತ್ತು ಪರಿಣತರ ಮಾತುಗಳನ್ನು ಕೇಳಿದ್ದರೆ ಅದರ ಗಂಭೀರತೆಯನ್ನು ಅವರು ಅರ್ಥಮಾಡಿಕೊಳ್ಳುತ್ತಿದ್ದರು’’ ಎಂದು ಸಿಎನ್‌ಎನ್ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕಮಲಾ ಹೇಳಿದರು.

ಈ ವರ್ಷದ ಕೊನೆಯ ವೇಳೆಗೆ ಅಮೆರಿಕದಲ್ಲಿ ಕೊರೋನ ವೈರಸ್‌ಗೆ ಲಸಿಕೆ ಸಿದ್ಧವಾಗಿರುತ್ತದೆ ಎಂಬುದಾಗಿ ಟ್ರಂಪ್ ನೀಡಿರುವ ಭರವಸೆಗೆ ಪ್ರತಿಕ್ರಿಯಿಸಿದ ಅವರು, ‘‘ಈ ಸಾಂಕ್ರಾಮಿಕ ಆರಂಭವಾದಾಗಿನಿಂದ, ಡೊನಾಲ್ಡ್ ಟ್ರಂಪ್‌ರ ಬಾಯಿಯಿಂದ ಬರುವ ಯಾವುದೇ ಮಾತುಗಳನ್ನು ನಂಬುವಂತಿಲ್ಲ ಎನ್ನುವುದನ್ನು ನಾವು ಕಲಿತುಕೊಂಡಿದ್ದೇವೆ. ನಾನು ಸಾರ್ವಜನಿಕ ಆರೋಗ್ಯ ಪರಿಣತರ ಮತ್ತು ವಿಜ್ಞಾನಿಗಳ ಮಾತುಗಳನ್ನು ನಂಬುತ್ತೇನೆ, ಡೊನಾಲ್ಡ್ ಟ್ರಂಪ್‌ರನ್ನಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News