×
Ad

ಗೊಂದಲಕಾರಿ ಸುದ್ದಿ ಪ್ರಸಾರ ಮಾಡಿದಲ್ಲಿ ಕ್ರಮ: ಉಡುಪಿ ಜಿಲ್ಲಾಧಿಕಾರಿ

Update: 2020-09-07 21:05 IST

ಉಡುಪಿ, ಸೆ.7: ಸ್ಥಳೀಯ ಕೇಬಲ್ ವಾಹಿನಿ ಮತ್ತು ಸಾಮಾಜಿಕ ತಾಣಗಳು ಸಮಾಜದಲ್ಲಿ ಗೊಂದಲ ಉಂಟು ಮಾಡುವಂತಹ ಸುದ್ದಿಗಳನ್ನು ಪ್ರಸಾರ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೇಬಲ್ ಟೆಲಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇತ್ತೀಚೆಗೆ ಕೆಲವು ಸಾಮಾಜಿಕ ಜಾಲತಾಣಗಳು ಪ್ರಸಾರ ಮಾಡಿದ ಅಪಪ್ರಚಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೆ ಸಾರ್ವಜನಿಕರು ಅಸಹ ಕಾರ ತೋರುತ್ತಿದ್ದು, ಇದರಿಂದ ರೋಗದ ಗಂಭೀರ ಪರಿಣಾಮ ಎದುರಿ ಸುವ ರೋಗಿಗಳ ಸಂಖ್ಯೆ ಅಧಿಕವಾಗಿದೆ. ಐಸಿಯು ಬೆಡ್‌ಗಳ ಕೊರತೆ ಯಾಗಿದೆ. ಇಂತಹ ಸುದ್ದಿಗಳನ್ನು ಪ್ರಸಾರ ಮಾಡುವಾಗ ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನೂ ಸಹ ಪ್ರಸಾರ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಡಿಸಿ ವಿಷಾದ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಅನಧಿಕೃತ ನ್ಯೂಸ್ ವೆಬ್‌ಸೈಟ್‌ಗಳು ಆರಂಭಗೊಂಡಿದ್ದು, ಅವುಗಳ ಮೂಲಕ ಸಾಮಾಜಿಕ ಸುದ್ದಿಗಳ ಸತ್ಯಾಸತ್ಯತೆ ಪರಾಮರ್ಶೆ ಮಾಡದೇ ಹರಿ ಬಿಡಲಾಗುತ್ತಿದ್ದು, ಇದರಿಂದ ಸರಕಾರದ, ಗಣ್ಯರ, ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ, ನಾಗರಿಕರ ತೇಜೋವಧೆಯ ಜೊತೆಗೆ ಧಾರ್ಮಿಕ, ಸಾಮಾಜಿಕ ಭಾವನೆಗಳಿಗೆ ಧಕ್ಕೆ ಮೂಡಿಸುವಂತಹ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂತಹ ಅನಧಿಕೃತ ನ್ಯೂಸ್ ವೆಬ್ ‌ಸೈಟ್ ಗಳನ್ನು ನಿಷೇಧಿಸುವಂತೆ ಮನವಿ ಬಂದಿವೆ. ಈ ರೀತಿ ನ್ಯೂಸ್ ವೆಬ್‌ಸೈಟ್ ಮಾಡಿಕೊಂಡು ಸಾರ್ವಜನಿಕ ಸುದ್ದಿ ಪ್ರಕಟಿಸಲು ಅನುಮತಿ ಪಡೆದಿರುವ ಬಗ್ಗೆ ಸಂಬಂದಪಟ್ಟ ವೆಬ್‌ಸೈಟ್ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಸ್ಥಳೀಯ ಕೇಬಲ್ ಟಿವಿಗಳು ಸಹ ಮನರಂಜನೆ ಹೊರತುಪಡಿಸಿ, ನ್ಯೂಸ್ ಪ್ರಸಾರ ಮಾಡಲು ಅನುಮತಿ ಪಡೆದಿರುವ ಬಗ್ಗೆ ಸಂಬಂದಪಟ್ಟ ಚಾನೆಲ್‌ಗಳ ಮುಖ್ಯಸ್ಥರು ದಾಖಲೆಗಳನ್ನು ನೀಡುವಂತೆ ನೋಟೀಸ್ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ಕಾಯ್ದೆ ಉಲ್ಲಂಸಿದ್ದಲ್ಲಿ ಕೇಬಲ್ ಆಪರೇಟರ್‌ಗಳ ಉಪಕರಣಗಳನ್ನು ವಶಪಡಿಸಿಕೊಂಡು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದರು. ಜಿಲ್ಲೆಯಲ್ಲಿ ಕೇಬಲ್ ಟಿವಿ ಶುಲ್ಕ ಪಡೆಯುವ ಬಗ್ಗೆ ವ್ಯತ್ಯಾಸವಿದ್ದು, ಗ್ರಾಹಕರಿಂದ ಹೆಚ್ಚಿನ ದರ ಪಡೆಯಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸುವಂತೆ ಸಮಿತಿಯ ಸದಸ್ಯೆ ತಾರಾ ತಿಮ್ಮಯ್ಯ ತಿಳಿಸಿದರು. ಹೆಚ್ಚಿನ ದರ ಪಡೆಯುವ ಬಗ್ಗೆ ಮತ್ತು ಕೇಬಲ್ ವಾಹಿನಿಗಳಲ್ಲಿ ಅನಪೇಕ್ಷಿತ ಕಾರ್ಯಕ್ರಮ ಪ್ರಸಾರ ವಾಗುತ್ತಿರುವ ಬಗ್ಗೆ ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಲ್ಲಿ ಆರಂಭಿಸಿರುವ ದೂರು ಕೋಶ (ದೂ.ಸಂ.2985242, ಈ ಮೇಲ್-varthabhavanaudupi@gmail.com) ದಲ್ಲಿ ಸಾರ್ವಜನಿಕರು ಲಿಖಿತ ದೂರು ದಾಖಲಿಸುವಂತೆ ವಾರ್ತಾಧಿಕಾರಿ ಮಂಜುನಾಥ್ ಬಿ. ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೆ.ವಿ.ಭಟ್, ಡಾ.ಜಿ.ಶಂಕರ್ ಸರ್ಕಾರಿ ಮಳಾ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ, ಮನಃಶಾಸ್ತ್ರಜ್ಞ ಡಾ.ವಿರೂಪಾಕ್ಷ ದೇವರಮನೆ, ವಿಶ್ವಾಸದ ಮನೆಯ ಫಾಸ್ಟರ್ ಸುನೀಲ್ ಜಾನ್ ಡಿಸೋಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News