ಹೆಬ್ರಿ ನಾಡ್ಪಾಲು ಬಳಿ 15 ಮಂಗಗಳ ಸಾಮೂಹಿಕ ಹತ್ಯೆ : ಅರಣ್ಯಾಧಿಕಾರಿಗಳಿಂದ ತನಿಖೆ

Update: 2020-09-07 15:40 GMT

ಹೆಬ್ರಿ, ಸೆ.7: ಮಂಗಗಳನ್ನು ಸಾಮೂಹಿಕವಾಗಿ ಹತ್ಯೆಗೈದು ಸೋಮೇಶ್ವರ- ಮಡಾಮಕ್ಕಿ ರಸ್ತೆಯ ನಾಡ್ಪಾಲು ಸಮೀಪದ ಅಂಗಡಿಬೆಟ್ಟು ಎಂಬಲ್ಲಿ ಎಸೆದಿ ರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಂಗಗಳ ಕಳೇಬರಗಳು ಕೊಳೆತು ಹೋಗಿದ್ದು, ಇವುಗಳನ್ನು ಎರಡು ಮೂರು ದಿನಗಳ ಹಿಂದೆ ಬೇರೆ ಜಾಗದಲ್ಲಿ ಹತ್ಯೆಗೈದು, ಗೋಣಿ ಚೀಲ ಗಳಲ್ಲಿ ತುಂಬಿಸಿ ಇಲ್ಲಿಗೆ ತಂದು ಎಸೆದಿರಬಹುದೆಂದು ಶಂಕಿಸಲಾಗಿದೆ. ಸ್ಥಳದಲ್ಲಿ 10 ದೊಡ್ಡ ಮತ್ತು 5 ಮರಿ ಮಂಗಗಳ ಕಳೇಬರಗಳು ಪತ್ತೆಯಾ ಗಿವೆ. ಇಂದು ಬೆಳಗ್ಗೆ ದೊರೆತ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಹಾಗೂ ಹೆಬ್ರಿಯ ಪಶು ವೈದ್ಯಾಧಿಕಾರಿ, ಸಮುದಾಯ ಕೇಂದ್ರದ ವೈದ್ಯಾಧಿ ಕಾರಿಗಳು ಸ್ಥಳ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ದೇಹದ ಮೈಮೇಲೆ ರಕ್ತಗಾಯಗಳಿರುವುದರಿಂದ ಇವುಗಳನ್ನು ಹಿಡಿದು, ಹೊಡೆದು ಸಾಯಿಸಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಇವುಗಳಿಗೆ ವಿಷ ಉಣಿಸಲಾಗಿದೆಯೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಬಳಿಕವೇ ತಿಳಿದುಬರಬೇಕಾಗಿದೆ. ಅದರಂತೆ ಮಂಗಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸ ಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಗೋಣಿಚೀಲಗಳನ್ನು ಎಸೆಯುವ ರಭಸಕ್ಕೆ ಕೆಲವು ಮಂಗಗಳ ಕಳೇಬರಗಳು ರಸ್ತೆ ಬದಿಯಲ್ಲಿ ಬಿದ್ದಿದ್ದರೆ, ಮತ್ತೆ ಹಲವು ಗೋಣಿಚೀಲಗಳ ಒಳಗೆ ಇವೆ. ದುಷ್ಕರ್ಮಿಗಳು ಯಾವ ಕಡೆಯಿಂದ ಬಂದು ಇವುಗಳನ್ನು ಎಸೆದಿರಬಹುದು ಎಂಬುದನ್ನು ಪತ್ತೆ ಮಾಡಲು ಸ್ಥಳಕೆ್ಕ ಶ್ವಾನದಳವನ್ನು ಕರೆ ಸಲಾಗಿದೆ.

ಸ್ಥಳೀಯವಾಗಿ ಎಲ್ಲೂ ಈ ರೀತಿ ಮಂಗಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡದಿರುವುದರಿಂದ ಇವುಗಳನ್ನು ಶಿವಮೊಗ್ಗ ಕಡೆಯಿಂದ ತಂದು ಹಾಕಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಕಾರ್ಕಳ ನ್ಯಾಯಾಲಯದ ಅನುಮತಿ ಪಡೆದು ಮಂಗಗಳ ಅಂತ್ಯಕ್ರಿಯೆ ನಡೆಸ ಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಕಾರ್ಕಳ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್, ಸಿದ್ಧಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವನ್ ‌ದಾಸ್, ಅರಣ್ಯ ಇಲಾಖೆಯ ಮೂಡಬಿದ್ರೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಪ್ರಶಾಂತ್, ವನ್ಯಜೀವಿ ವಿಭಾಗದ ಹೆಬ್ರಿ ವಲಯ ಅರಣ್ಯಾಧಿಕಾರಿ ಅನಿಲ್, ಹೆಬ್ರಿ ಪೊಲೀಸ್ ಠಾಣಾಧಿಕಾರಿ ಸುಮಾ ಬಿ. ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಬ್ರಿ ವಲಯ ಅರಣ್ಯಾಧಿ ಕಾರಿ ದಿನೇಶ್ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News