ಕಟ್ಟಡ ತ್ಯಾಜ್ಯ ಹಗಲು ಸಾಗಾಟಕ್ಕೆ ನಿರ್ಬಂಧ: ಕಾಯ್ದೆ ಉಲ್ಲಂಘಿಸಿದರೆ ಪರವಾನಿಗೆ ರದ್ದು
ಮಂಗಳೂರು, ಸೆ.7: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಕಟ್ಟಡ ನಿರ್ಮಾಣ ಸ್ಥಳದ ಭೂ ಅಗೆತದಿಂದ ತೆಗೆಯಲಾದ ಮಣ್ಣನ್ನು ಮತ್ತು ಹಳೆ ಕಟ್ಟಡ ಕೆಡವುದರಿಂದ ಉಂಟಾದ ಅವಶೇಷಗಳನ್ನು ಹಗಲು ವೇಳೆ ಸಾಗಾಟ ಮಾಡಿದ್ದೇ ಆದಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಎಚ್ಚರಿಕೆ ರವಾನಿಸಿದ್ದಾರೆ.
ಇನ್ನು ಮುಂದೆ ಯಾವುದೇ ಕಟ್ಟಡ ತ್ಯಾಜ್ಯ, ಅವಶೇಷ, ಮಣ್ಣು ಸಾಗಾಟವನ್ನು ಕಡ್ಡಾಯವಾಗಿ ಮುಚ್ಚಿದ ಲಾರಿಗಳ ಮೂಲಕ ರಾತ್ರಿ ವೇಳೆಯಲ್ಲಿ ಸಾಗಾಟ ಮಾಡುವಂತೆ ಕಟ್ಟು ನಿಟ್ಟಿನ ನಿರ್ದೇಶನ ನೀಡಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಲದೆ, ಕಾಯ್ದೆ ಉಲ್ಲಂಘಿಸುವವರಿಂದ ಕಟ್ಟಡ ಮತ್ತು ಭಗ್ನಾವಶೇಷ ನಿರ್ವಹಣಾ ನಿಯಮ 2016ರಂತೆ ರಸ್ತೆ ಸ್ವಚ್ಛತೆಯ ವೆಚ್ಚವನ್ನು ವಸೂಲು ಮಾಡಲಾಗುವುದು. ಅಲ್ಲದೆ, ಅಂತಹ ಸ್ಥಳದಲ್ಲಿ ಕಟ್ಟಡ ನಿರ್ಮಾಣದ ಪರವಾನಿಗೆಯನ್ನು ರದ್ದುಪಡಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ನಗರದಲ್ಲಿ ಕಟ್ಟಡ ತ್ಯಾಜ್ಯವನ್ನು ವಿಲೇವಾರಿಗೊಳಿಸಲು ತೆರೆದ ಲಾರಿ ಮೂಲಕ ಹಗಲು ಹೊತ್ತಿನಲ್ಲಿ ಸಾಗಾಟ ಮಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಈ ರೀತಿ ಸಾಗಾಟದಿಂದ ಉಂಟಾದ ಧೂಳಿನಿಂದ ವಾಯುಮಾಲಿನ್ಯ ಸಂಭವಿಸುತ್ತಿದೆ. ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಇದರಿಂದಾಗಿ ಭಾರೀ ತೊಂದರೆ ಉಂಟಾಗುತ್ತಿದೆ ಎಂದರು.
ರಸ್ತೆಗಳಲ್ಲಿ ಬೀಳುತ್ತಿರುವ ತ್ಯಾಜ್ಯದಿಂದಾಗಿ ವಾಹನಗಳು ಜಾರಿಕೊಂಡು ಅಪಘಾತ ಪ್ರಕರಣಗಳು ಸಂಭವಿಸಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಇಂತಹ ಚಟುವಟಿಕೆಗಳು ಮುನಿಸಿಪಲ್ ಕಾಯ್ದೆಯನ್ವಯ ಕಾನೂನು ಬಾಹಿರವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.