×
Ad

"ಆಮ್ಲಜನಕ ಸಿಲಿಂಡರ್ ನೊಂದಿಗೆ ಶಾಲೆಗೆ ಹೋಗುವ ಯೋಚನೆ ಒಂದು ದುಃಸ್ವಪ್ನ"

Update: 2020-09-08 13:04 IST
ರಿದ್ಧಿಮಾ ಪಾಂಡೆ (Photo: twitter/@ridhimapandey7)

ಡೆಹ್ರಾಡೂನ್: ಆಮ್ಲಜನಕ ಸಿಲಿಂಡರ್‍ನೊಂದಿಗೆ ಶಾಲೆಗೆ ಹೋಗುವುದು ತನಗೆ ದೊಡ್ಡ ದುಃಸ್ವಪ್ನವಾಗಿದೆ ಎಂದು ಉತ್ತರಾಖಂಡದ ಹರಿದ್ವಾರದ ಹವಾಮಾನ ಬದಲಾವಣೆ ಹೋರಾಟಗಾರ್ತಿ, 12 ವರ್ಷದ ರಿದ್ಧಿಮಾ ಪಾಂಡೆ ಪ್ರಧಾನಿ ನರೇಂದ್ರ ಮೋದಿಗೆ ತನ್ನ ಕೈಬರಹದಲ್ಲಿ ಬರೆದಿರುವ  ಎರಡು ಪುಟಗಳ ಪತ್ರದಲ್ಲಿ ಬರೆದಿದ್ದಾಳೆ. "ಭವಿಷ್ಯದಲ್ಲಿ ನಾವು ಹೋಗುವಲ್ಲೆಲ್ಲಾ ನಮ್ಮ ಹೆಗಲ ಮೇಲೆಯೇ ಹೊತ್ತುಕೊಂಡು ಹೋಗಬೇಕಾದ ಆಮ್ಲಜನಕ ಸಿಲಿಂಡರ್‍ಗಳು ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗದಂತೆ ನೋಡಿಕೊಳ್ಳಿ.'' ಎಂದು ಆಕೆ ತನ್ನ ಪತ್ರದಲ್ಲಿ ಪ್ರಧಾನಿಗೆ ಕಳಕಳಿಯ ಮನವಿ ಮಾಡಿದ್ದಾಳೆ.

ಮಾನವ ಚಟುವಟಿಕೆಗಳು ಸೀಮಿತವಾಗಿದ್ದರೆ ಹಾಗೂ ನಿಯಂತ್ರಿಸಲ್ಪಟ್ಟರೆ ನಾವು ಕಡಿಮೆ ಮಾಲಿನ್ಯ ಹಾಗೂ ಶುಭ್ರ ನೀಲಿ ಆಕಾಶ ಹೊಂದಬಹುದು ಎಂದು ಕೊರೋನವೈರಸ್ ಸಾಂಕ್ರಾಮಿಕ ತೋರಿಸಿದೆ ಎಂದು ತಾನು ಅಂದುಕೊಂಡಿದ್ದರಿಂದ ಈ ಪತ್ರ ಬರೆದಿರುವುದಾಗಿ ಆಕೆ ಹೇಳಿದ್ದಾಳೆ.

"ಸೋಮವಾರ (ಸೆಪ್ಟೆಂಬರ್ 7) ನಾವು ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ನೀಲಿ ಆಕಾಶಕ್ಕಾಗಿ ಶುದ್ಧ ಗಾಳಿ ದಿನವನ್ನು ಆಚರಿಸಿದ್ದೇವೆ. ಶುದ್ಧ ಗಾಳಿ ಆರೋಗ್ಯ, ಉತ್ತಮ ಆರ್ಥಿಕತೆ ಹಾಗೂ ಉತ್ತಮ ಪರಿಸರಕ್ಕೆ ಅಗತ್ಯ ಎಂಬ ಸಂದೇಶ ಸಾರುವುದು ಈ ದಿನದ ಉದ್ದೇಶ. ಆದುದರಿಂದ ಈ ದಿನ ಪ್ರಧಾನಿಗೆ ಪತ್ರ ಬರೆಯಲು ಆರಿಸಿದೆ. ಅಂಚೆ ಮೂಲಕ ಪತ್ರ ಕಳುಹಿಸಿದ್ದೇನೆ, ಅವರು ಪ್ರತಿಕ್ರಿಯಿಸುತ್ತಾರೆಂದು ನಿರೀಕ್ಷಿಸುತ್ತೇನೆ,'' ಎಂದು ರಿದ್ಧಿಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News