ಮಹಾರಾಷ್ಟ್ರದ ಉಭಯ ಸದನಗಳಲ್ಲಿ ಅರ್ನಬ್, ಕಂಗನಾ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ

Update: 2020-09-08 11:36 GMT

 ಮುಂಬೈ, ಸೆ.8: ಮಹಾರಾಷ್ಟ್ರ ವಿಧಾನಸಭೆಯ ಮಳೆಗಾಲದ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಉಭಯ ಸದನಗಳಲ್ಲಿ ಶಿವಸೇನೆಯು ರಿಪಬ್ಲಿಕ್ ಟಿವಿಯ ಆಡಳಿತ ನಿರ್ದೇಶಕ ಹಾಗೂ ಪ್ರಧಾನ ಸಂಪಾದಕ ಅರ್ನಬ್  ಗೋಸ್ವಾಮಿ ಹಾಗೂ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿರುವ ಚಿತ್ರನಟಿ ಕಂಗನಾ ರನೌತ್ ವಿರುದ್ಧ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿದೆ.

ವಿಧಾನಸಭೆಯಲ್ಲಿ ಗೋಸ್ವಾಮಿ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ ಶಿವಸೇನೆಯ ಶಾಸಕ ಪ್ರತಾಪ್ ಸರ್‌ನಾಯಕ್, "ಗೋಸ್ವಾಮಿ ಅವರು ಅಭಿವ್ಯಕ್ತಿ ಸ್ವಾತಂತ್ರವನ್ನು ಉಲ್ಲಂಘಿಸಿದ್ದಾರೆ ಹಾಗೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅನಪೇಕ್ಷಿತ ಹೇಳಿಕೆ ನೀಡಿದ್ದಾರೆ'' ಎಂದರು.

ನಿರ್ಣಯ ವಿರೋಧಿಸಿ ಪ್ರತಿಪಕ್ಷ ಬಿಜೆಪಿಯ ಗದ್ದಲದ ಎಬ್ಬಿಸಿದ್ದು, ಈ ನಡುವೆಯೂ  ಶಿವಸೇನೆಯ ಸಂಸದೀಯ ವ್ಯವಹಾರ ಸಚಿವ ಅನಿಲ್ ಪರಬ್ ಅವರು ನಿರ್ಣಯಕ್ಕೆ ಬೆಂಬಲ ನೀಡಿದರು.

 ಉಪ ಸ್ಪೀಕರ್ ನರಹರಿ ಅವರು "ಸರ್‌ನಾಯಕ್ ಅವರ ಪ್ರಸ್ತಾವನೆಯ ಮೇಲೆ ಶಾಸಕಾಂಗ ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು'' ಎಂದು ತೀರ್ಪು ನೀಡಿದರು. ಈ ವಿಷಯದ ಬಗ್ಗೆ ಗದ್ದಲ ಎದ್ದಾಗ ಸದನವನ್ನು 10 ನಿಮಿಷ ಮುಂದೂಡಲಾಯಿತು. ನಿರ್ಣಯವನ್ನು ಬೆಂಬಲಿಸಿರುವ ಎನ್‌ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್,ನಿರ್ಣಯದ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕೆಂದರು.

ವಿಧಾನಪರಿಷತ್ತಿನಲ್ಲಿ ಶಿವಸೇನೆಯ ಶಾಸಕ ಮನೀಶಾ ಕಾಯಂಡೆ,ಅರ್ನಬ್  ಗೋಸ್ವಾಮಿ ವಿರುದ್ಧ ಇದೇ ರೀತಿಯ ನಿರ್ಣಯ ಮಂಡಿಸಿದರೆ, ಕಾಂಗ್ರೆಸ್‌ನ ಅಶೋಕ್ ಜಗತಾಪ್ ಅವರು ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ಮುಂಬೈಗೆ ಮಾನ ಹಾನಿ ಮಾಡಿದ್ದಕ್ಕಾಗಿ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿದರು. ವಿಧಾನಪರಿಷತ್ತಿನ ಅಧ್ಯಕ್ಷ ರಾಮರಾಜೆ ನಾಯಕ್ ನಿಂಬಾಳ್ಕರ್ ಎರಡೂ ನಿರ್ಣಯವನ್ನು ಒಪ್ಪಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News