ಪ್ರೊ.ಅ. ಸುಂದರರಿಗೆ ಎಂ.ಗೋವಿಂದ ಪೈ ಪ್ರಶಸ್ತಿ
ಉಡುಪಿ, ಸೆ.8: ನಾಡಿನ ಖ್ಯಾತನಾಮ ಪುರಾತತ್ವ ಸಂಶೋಧಕ, ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಅ.ಸುಂದರ ಅವರಿಗೆ ಪ್ರತಿಷ್ಠಿತ ರಾಷ್ಟ್ರಕವಿ ಎಂ. ಗೋವಿಂದ ಪೈ ಪ್ರಶಸ್ತಿಯನ್ನು ಘೋಷಿಸಿದ್ದು, ಇದೇ ಸೆ.12ರಂದು ಶಿವಮೊಗ್ಗದ ಅವರ ನಿವಾಸದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮಣಿಪಾಲ ಗ್ಲೋಬಲ್‌ನ ಮುಖ್ಯಸ್ಥ ಟಿ.ಮೋಹನದಾಸ್ ಪೈ ಅವರು ತಮ್ಮ ತಾಯಿ ವಿಮಲಾ ಪೈ ಅವರ ಹೆಸರಿನಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ಪ್ರಾಯೋಜಿಸಿರುವ ಈ ಪ್ರಶಸ್ತಿ ಒಂದು ಲಕ್ಷ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಕೇಂದ್ರದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠಿತ ಈ ಪ್ರಶಸ್ತಿಗೆ ಇಲ್ಲಿಯವರೆಗೆ ಭಾಜನರಾದವರು ಪ್ರೊ. ಶ್ರೀನಿವಾಸ ರಿತ್ತಿ, ಪ್ರೊ.ಕೆ.ಎಸ್. ನಿಸಾರ್ ಅಹಮದ್, ಡಾ.ಬಿ.ಸುರೇಂದ್ರ ರಾವ್, ಪ್ರೊ.ಕೆ. ತಿರುಮಲೇಶ್ ಹಾಗೂ ಪ್ರೊ.ಅಮೃತ ಸೋಮೇಶ್ವರ.
ಮೂಲತ: ಬ್ರಹ್ಮಾವರ ಸಮೀಪದ ನೀಲಾವರದವರಾದ ಪ್ರೊ. ಅ.ಸುಂದರ ಅವರು ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿ ಬಹುಕಾಲ ಧಾರವಾಡದ ಕರ್ನಾಟಕ ವಿಶ್ವದ್ಯಾಲಯದ ಪ್ರಾಚೀನ ಭಾರತೀಯ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರೂ, ವಿಭಾಗ ಮುಖ್ಯಸ್ಥರೂ ಆಗಿ ಕಾರ್ಯ ನಿರ್ವಹಿಸಿದ್ದರು.
ಬಳಿಕ ಕೆಲವು ವರ್ಷ ಬಿಜಾಪುರದ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ, ಮೈಸೂರು ವಿವಿಯ ಝಾಕೀರ್ ಹುಸೇನ್ ಪೀಠದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ಶಿವಮೊಗ್ಗೆಯಲ್ಲಿ ವಾಸವಾಗಿದ್ದಾರೆ. ಪುರಾತತ್ವ ಶಾಸ್ತ್ರಜ್ಞರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಪ್ರೊ. ಸುಂದರ ಅವರು, ಭಾರತದ ಮತ್ತು ವಿಶೇಷವಾಗಿ ಕರ್ನಾಟಕದ ಹಲವಾರು ಉತ್ಖನನಗಳಲ್ಲಿ (ತೇರದಾಳ, ಸನ್ನತಿ, ಮಲಪ್ರಭಾನದಿ ತೀರ) ಮಹತ್ವದ ಪಾತ್ರ ವಹಿಸಿದ್ದಾರೆ. ಸಾಂಸ್ಕೃತಿಕ ಪರಂಪರೆಗಳ ರಕ್ಷಣೆಗೆ ವಿಶೇಷ ಮುತುವರ್ಜಿ ವಹಿಸಿರುವ ಇವರು, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕನ ಅರಮನೆಯ ಪುನ:ಸ್ಥಾಪನೆಯನ್ನು ಕಾಳಜಿಯಿಂದ ಕೈಗೊಂಡಿದ್ದರು.
ಶಿಲಾ ಕಲೆ (ರಾಕ್ ಆರ್ಟ್) ಹಾಗೂ ಶಿಲಾಯುಗದ ಕುರಿತು ವಿಶೇಷ ಅಧ್ಯಯನ ನಡೆಸಿರುವ ಇವರ ಪ್ರಸಿದ್ಧ ಕೃತಿ ‘ಅರ್ಲಿ ಚೇಂಬರ್ ಆಫ್ ಸೌತ್ ಇಂಡಿಯಾ’. ಹಲವಾರು ಪ್ರಾಗ್ರೈತಿಹಾಸಿಕ ನೆಲೆಗಳ ಕುರಿತು ಆಳವಾದ ಅಧ್ಯಯನ ಮಾಡಿರುವ ಅವರು ಮುನ್ನೂರಕ್ಕೂ ಹೆಚ್ಚು ಮಹತ್ವದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಾಗೂ ಈ ವಿಷಯಗಳಲ್ಲಿ ನೂರಾರು ವಿದ್ಯಾರ್ಥಿಗಳನ್ನು ಸಂಶೋಧನೆಗೆ ಸಿದ್ಧಗೊಳಿಸಿದ್ದರು. ಸದ್ಯ ಪ್ರಾಗ್ರೈತಿಹಾಸಿಕ ಕಾಲದಿಂದ ಇಂದಿನವರೆಗೆ ಭಾರತೀಯ ಇತಿಹಾಸ ಸಂಪುಟಗಳ ಪ್ರಕಾಶನದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.