×
Ad

ಪೊಲೀಸರ ಬಾಕಿ ಭತ್ಯೆ ತಿಂಗಳೊಳಗೆ ಪಾವತಿ: ಡಿಜಿಪಿ ಪ್ರವೀಣ್ ಸೂದ್

Update: 2020-09-08 19:40 IST

‌ಉಡುಪಿ, ಸೆ.8: ಕೊರೋನದಿಂದ ಬಾಕಿಯಾಗಿರುವ ಪೊಲೀಸರ ಪ್ರಯಾಣ ಮತ್ತು ತುಟಿ ಭತ್ಯೆಯನ್ನು ಪಾವತಿಸಲು ನಿರ್ದೇಶನ ನೀಡಲಾಗಿದ್ದು, ಈ ಸಂಬಂಧ ಅನುದಾನ ಕೂಡ ಬಿಡುಗಡೆ ಮಾಡುತ್ತಿದ್ದೇನೆ. ಇದರಿಂದ ಕಳೆದ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ಬಾಕಿ ಇರುವ ಭತ್ಯೆಯನ್ನು ತಿಂಗಳೊಳಗೆ ಪಾವತಿಸ ಲಾಗುವುದು. ಇನ್ನು ಮುಂದೆ ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ, ಕೆಲಸ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇನೆ. ಕಾನ್‌ಸ್ಟೇಬಲ್ ನಿಂದ ಎಸ್ಪಿವರೆಗಿನ ಎಲ್ಲ ಅಧಿಕಾರಿಗಳು ಕೋವಿಡ್ ಸಮಯದಲ್ಲಿ ಉತ್ತಮ ವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅದಕ್ಕಾಗಿ ಅವರಿಗೆಲ್ಲ ಅಭಿನಂದನೆ ಹೇಳಲು ಜಿಲ್ಲೆಗೆ ಭೇಟಿ ನೀಡಿದ್ದೇನೆ ಎಂದರು.

ಜಿಲ್ಲೆಯ ಆಡಳಿತಾತ್ಮಕ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಮುಕ್ತ ಚರ್ಚೆ ಮಾಡಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ಬಳಕೆ ಮಾಡಿರುವಂತೆ ಮುಂದೆಯೂ ಹೆಚ್ಚು ಹೆಚ್ಚು ತಂತ್ರಜ್ಞಾನವನ್ನು ಉಪಯೋಗಿಸಲಾಗುವುದು. ದೈಹಿಕ ಭೇಟಿಯ ಬದಲು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ಕಾರ್ಯಗತಗೊಳಿಸಲಾಗಿರುವ ಎಲ್ಲ ಸಮಸ್ಯೆಗಳಿಗೆ ಒಂದೇ ದೂರವಾಣಿ ಸಂಖ್ಯೆ 112ನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಪಾಸ್‌ಪೋರ್ಟ್, ಮೊಬೈಲ್ ಕಳವು ಸೇರಿದಂತೆ ಸಣ್ಣ ಸಣ್ಣ ವಿಚಾರಗಳಿಗೂ ಪೊಲೀಸ್ ಠಾಣೆಗೆ ಬರುವ ಬದಲು ಆ್ಯಪ್ ಮೂಲಕ ದೂರು ದಾಖಲಿಸುವ ತಂತ್ರಜ್ಞಾನವನ್ನು ಇಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ರಕ್ಷಾ ಸಾವಿನ ಪ್ರಕರಣ: ಸಿಓಡಿ ತನಿಖೆ ಆರಂಭಖಾಸಗಿ ಆಸ್ಪತ್ರೆಯ ಚಿಕಿತ್ಸೆಯಿಂದ ಅನುಮಾನಾಸ್ಪದವಾಗಿ ಮೃತಪಟ್ಟ ರಕ್ಷಾ ಸಾವಿನ ಪ್ರಕರಣದ ತನಿಖೆಯನ್ನು ಸಿಓಡಿ ಪೊಲೀಸರು ಈಗಾಗಲೇ ಆರಂಭಿಸಿದ್ದಾರೆ. ತನಿಖೆ ನಡೆಯುವ ಸಂದರ್ಭ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಪ್ರವೀಣ್ ಸೂದ್ ತಿಳಿಸಿದರು.

ಜೇಷ್ಠತೆ ಆಧಾರದಲ್ಲಿ ಭಡ್ತಿಯಲ್ಲಿ ಪುರುಷ ಪೊಲೀಸರಿಗೆ ಅನ್ಯಾಯ ಆಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನ್ಯಾಯಾಲಯ ನೀಡಿದ ತೀರ್ಪಿನಂತೆ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮಲ್ಲಿ ಮಹಿಳೆ ಮತ್ತು ಪುರುಷರು ಎಂಬ ಯಾವುದೇ ವ್ಯತ್ಯಾಸ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News