×
Ad

42 ಕೋಟಿ ಬಡವರಿಗೆ 68,820 ಕೋ.ರೂ. ಲಾಭ ಒದಗಿಸಿದ ಪಿಎಂಜಿಕೆಪಿ: ಸರಕಾರ

Update: 2020-09-08 20:11 IST

ಹೊಸದಿಲ್ಲಿ,ಸೆ.8: ಕೇಂದ್ರ ಸರಕಾರವು ಕಳೆದ ಮಾ.26ರಂದು ಪ್ರಕಟಿಸಿದ್ದ 1.7 ಲ.ಕೋ.ರೂ.ಗಳ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ (ಪಿಎಂಜಿಕೆಪಿ)ನಡಿ ಈವರೆಗೆ 42 ಕೋ.ಬಡವರಿಗೆ 68,820 ಕೋ.ರೂ.ಗಳ ನಗದು ಲಾಭಗಳನ್ನು ಒದಗಿಸಿದೆ ಎಂದು ವಿತ್ತ ಸಚಿವಾಲಯವು ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಭಾರತದ ಜಿಡಿಪಿಯ ಸುಮಾರು ಶೇ.0.8ರಷ್ಟಿರುವ ಈ ಪ್ಯಾಕೇಜ್ ವಿಶೇಷವಾಗಿ ದುರ್ಬಲ ವರ್ಗಗಳ ಹಣಕಾಸು ಒತ್ತಡಗಳನ್ನು ನಿವಾರಿಸುವ ಉದ್ದೇಶವನ್ನು ಹೊಂದಿದ್ದು, ಬಡವರಿಗೆ ಆಹಾರ ಮತ್ತು ನಗದು ಭದ್ರತೆಯ ಭರವಸೆಯನ್ನು ನೀಡಿತ್ತು. ನೇರ ಹಣಕಾಸು ನೆರವಿನ ಜೊತೆಗೆ ಉಚಿತ ಗೋಧಿ, ಅಕ್ಕಿ,ಬೇಳೆ ಮತ್ತು ಅಡುಗೆ ಅನಿಲದ ಸಿಲಿಂಡರ್ ‌ಗಳ ವಿತರಣೆಯನ್ನೂ ಅದು ಒಳಗೊಂಡಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮೊದಲ ಕಂತಾಗಿ ಸರಕಾರವು 8.94 ಕೋ ಫಲಾನುಭವಿಗಳಿಗೆ 17,891 ಕೋ.ರೂ.ಗಳನ್ನು ಪಾವತಿಸಿದೆ. ದೇಶದ ಎಲ್ಲ ರೈತ ಕುಟುಂಬಗಳಿಗೆ ಪ್ರತಿ ವರ್ಷ 6,000 ರೂ.ಗಳ ನಗದು ಬೆಂಬಲವನ್ನು ಮೂರು ಕಂತುಗಳಲ್ಲಿ ಒದಗಿಸಲು 2018,ಡಿ.1ರಿಂದ ಪೂರ್ವಾನ್ವಯವಾಗಿ ಈ ಯೋಜನೆಯನ್ನು ಘೋಷಿಸಲಾಗಿತ್ತು.

ಪ್ರಧಾನ ಮಂತ್ರಿ ಜನಧನ ಯೋಜನೆ (ಪಿಎಂಜೆಡಿವೈ)ಯಡಿ 20.65 ಕೋ.ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಮೊದಲ ಕಂತಾಗಿ 10,325 ಕೋ.ರೂ.ಗಳನ್ನು ಈಗಾಗಲೇ ಜಮಾ ಮಾಡಲಾಗಿದ್ದು, 10315 ಕೋ. ಮತ್ತು 10,312 ಕೋ.ರೂ.ಗಳ 2 ಮತ್ತು 3ನೇ ಕಂತುಗಳನ್ನೂ ಜಮಾ ಮಾಡಲಾಗಿದೆ ಎಂದು ಹೇಳಿಕೆಯು ತಿಳಿಸಿದೆ. ಕೋವಿಡ್ ಲಾಕ್‌ ಡೌನ್ ಹಿನ್ನೆಲೆಯಲ್ಲಿ ಹೆಚ್ಚಿನ ಬಡಮಹಿಳೆಯರ ಜೀವನೋಪಾಯಗಳಿಗೆ ವ್ಯತ್ಯಯವುಂಟಾಗಿದ್ದ ಸಂದರ್ಭದಲ್ಲಿ ಎಪ್ರಿಲ್‌ ನಿಂದ ಮೊದಲ್ಗೊಂಡು ಮೂರು ತಿಂಗಳ ಅವಧಿಗೆ ಪ್ರತಿ ತಿಂಗಳು 500 ರೂ.ಗಳ ಪರಿಹಾರವನ್ನು ಸರಕಾರವು ಪ್ರಕಟಿಸಿತ್ತು.

ಇದೇ ರೀತಿ 2.81 ಕೋ.ಹಿರಿಯ ನಾಗರಿಕರು,ವಿಧವೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ತಲಾ 1,000 ರೂ.ಗಳಂತೆ ಒಟ್ಟು 2814.5 ಕೋ.ರೂ. ಪರಿಹಾರವನ್ನು ವಿತರಿಸಲಾಗಿದೆ. ಸುಮಾರು 1.82 ಕೋ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 4,987.18 ಕೋ.ರೂ.ಗಳ ಹಣಕಾಸು ನೆರವನ್ನು ಒದಗಿಸಲಾಗಿದೆ ಎಂದೂ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News