ಅಸೈ ಮದಕದಲ್ಲಿ ನಿರ್ಮಾಣಗೊಂಡ ಮುಸ್ಲಿಂ ವಸತಿ ಶಾಲೆಯ ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧ
ಮಂಗಳೂರು, ಸೆ.8: ಮುಸ್ಲಿಮ್ ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸಿಕೊಡುವ ಉದ್ದೇಶದಿಂದ 24 ವರ್ಷದ ಹಿಂದೆ ಸ್ಥಾಪಿಸಲ್ಪಟ್ಟ ‘ನಾಟೆಕಲ್ ಮುಸ್ಲಿಂ ವಸತಿ ಶಾಲೆ’ಯ ಹೊಸ ಕಟ್ಟಡವು ಮಂಜನಾಡಿ ಗ್ರಾಮದ ಅಸೈ ಮದಕ ಎಂಬಲ್ಲಿ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ಧಗೊಂಡಿದೆ.
ಈವರೆಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಶಾಲೆಗೆ ಇದೀಗ ಸ್ವಂತ ಕಟ್ಟಡ ನಿರ್ಮಾಣಗೊಂಡಿವೆ. 15 ಸಾವಿರಕ್ಕೂ ಅಧಿಕ ಚ.ಅ.ಯ ಈ ಕಟ್ಟಡದಲ್ಲಿ ಸುಸಜ್ಜಿತ ತರಗತಿ ಕೋಣೆ, ಲ್ಯಾಬ್, ಕಂಪ್ಯೂಟರ್, ನಮಾಝ್ ಮತ್ತು ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೋನ ಹಿನ್ನೆಲೆಯಲ್ಲಿ ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯ. ಕಟ್ಟಡವು ವಿಶಾಲವಾಗಿರುವ ಕಾರಣ ಸುರಕ್ಷಿತ ಅಂತರ ಕಾಪಾಡಲು ಯಾವುದೇ ಸಮಸ್ಯೆ ಇಲ್ಲ. ಹಾಗಾಗಿ ಸರಕಾರದ ಅನುಮತಿ ಪಡೆದು 2020-21ನೆ ಸಾಲಿನಲ್ಲಿ 6ರಿಂದ 9ನೆ ತರಗತಿವರೆಗಿನ ನಿಗದಿತ ಸಂಖ್ಯೆಯ ಮಕ್ಕಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸರಕಾರಿ ಮುಸ್ಲಿಂ ವಸತಿ ಶಾಲೆಯಾಗಿರುವ ಇಲ್ಲಿ 6ನೆ ತರಗತಿಯಿಂದ 10ನೆ ತರಗತಿಯವರೆಗೆ ಮುಸ್ಲಿಂ ಗಂಡು ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಉಚಿತ ಶಿಕ್ಷಣ ಪಡೆಯಬಹುದಾಗಿದೆ. ಅರಬಿಕ್ ಮದ್ರಸ ಶಿಕ್ಷಣವೂ ಇದೆ. ಇಲ್ಲಿ ನುರಿತ ಮತ್ತು ಅನುಭವಿ ಶಿಕ್ಷಕ ರಿಂದ ಬೋಧನೆಯ ವ್ಯವಸ್ಥೆ ಇದೆ. ಕಂಪ್ಯೂಟರ್, ಚಿತ್ರಕಲೆ, ದೈಹಿಕ ಮತ್ತು ಆರೋಗ್ಯ ಶಿಕ್ಷಣವಲ್ಲದೆ ಸ್ಟೇಷನರಿ-ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ಹೀಗೆ ಎಲ್ಲವೂ ಉಚಿತವಾಗಿ ಲಭ್ಯವಿದೆ. ಊಟ, ವಸತಿಯೂ ಉಚಿತ. ಪ್ರಸಕ್ತ ಸಾಲಿನಲ್ಲಿ ಸುಮಾರು 250 ಮಕ್ಕಳ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಮೊ.ಸಂ: 9845952483, 9449311924ನ್ನು ಸಂಪರ್ಕಿಸಬಹುದು.
ತೊಕ್ಕೊಟ್ಟು ಸಮೀಪದ ಕೋಟೆಕಾರ್ ಎಂಬಲ್ಲಿ 1996ರಲ್ಲಿ ಆರಂಭಗೊಂಡ ಈ ಮುಸ್ಲಿಂ ವಸತಿ ಶಾಲೆಯಲ್ಲಿ ಸುಮಾರು 200 ಮಕ್ಕಳು ಕಲಿಯುತ್ತಿದ್ದರು. 2004ರಲ್ಲಿ ಈ ಶಾಲೆಯು ನಾಟೆಕಲ್‌ಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಜಾಗದ ಸಮಸ್ಯೆಯಿದ್ದ ಕಾರಣ 2006ರಲ್ಲಿ ತೊಕ್ಕೊಟ್ಟಿಗೆ ವರ್ಗಾಯಿಸಲಾಗಿತ್ತು. 2009ರಲ್ಲಿ ಮತ್ತೆ ನಾಟೆಕಲ್‌ಗೆ ಸ್ಥಳಾಂತರಿಸಲಾಯಿತು. ಇದೀಗ ಮಂಜನಾಡಿ ಗ್ರಾಮದ ಅಸೈ ಮದಕದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದೆ.
ಇಲ್ಲೀಗ ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟಿವೆ. ಹಾಗಾಗಿ ಶಾಲೆಯ ಪ್ರಾಂಶುಪಾಲರು ‘ಮುಸ್ಲಿಮ್ ಮಕ್ಕಳ’ನ್ನು ಸೇರ್ಪಡೆಗೊಳಿಸಿ ಎಂದು ಬಹುತೇಕ ಜಮಾಅತ್, ಮುಸ್ಲಿಮ್ ಕಮಿಟಿ, ಜನಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇವರ ಮನವಿಗೆ ಸ್ಪಂದಿಸಿ ಮಕ್ಕಳನ್ನು ಶಾಲೆಗೆ ಸೇರಿಸಿದರೆ, ಈ ಶಾಲೆ ಉಳಿದೀತು. ಇಲ್ಲದಿದ್ದರೆ ಕನ್ನಡ ಶಾಲೆಗಳು ಮುಚ್ಚಲ್ಪಟ್ಟಂತೆ ಇದು ಕೂಡ ಮುಚ್ಚಿದರೆ ಅಚ್ಚರಿ ಇಲ್ಲ.
ಅಂದಹಾಗೆ, ಆರಂಭದಲ್ಲಿ ಈ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಸಲಾಗಿತ್ತು. ಬಳಿಕ ಉರ್ದು ಭಾಷೆಯ ಕಲಿಕೆಗೂ ಅವಕಾಶ ಕಲ್ಪಿಸಲಾಗಿತ್ತು. 2010-11ರಿಂದ ರಾಜ್ಯ ಸರಕಾರ ಇಲ್ಲಿ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಿದೆ.