×
Ad

ಕಾನೂನಿಗೆ ಯಾರೂ ಗಣ್ಯರಲ್ಲ, ಎಲ್ಲರೂ ಸಮಾನರು: ಡಿಜಿಪಿ ಪ್ರವೀಣ್ ಸೂದ್

Update: 2020-09-08 20:55 IST

ಮಂಗಳೂರು, ಸೆ.8: ‘ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿರುವವರು ಗಣ್ಯರು’ ಎಂಬುದು ಮಾಧ್ಯಮದವರ ಕಲ್ಪನೆ. ಅಪರಾಧ ಕೃತ್ಯದಲ್ಲಿ ಭಾಗಿಯಾಗುವವರೆಲ್ಲರೂ ತಪ್ಪಿತಸ್ಥರೇ ಆಗಿರುತ್ತಾರೆ. ಕಾನೂನಿಗೆ ಎಲ್ಲರೂ ಸಮಾನರು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಂಜೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದವರನ್ನು ಬಂಧಿಸುವ ಪ್ರಕ್ರಿಯೆ ರಾಜ್ಯಾದ್ಯಂತ ಮುಂದುವರಿದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಗಾಂಜಾ ಕೆ.ಜಿ.ಗಟ್ಟಲೇ ಬಂದರೆ, ಸಿಂಥೆಟಿಕ್ ಮಾದಕ ದ್ರವ್ಯವು ಗ್ರಾಮ್ಸ್‌ನಲ್ಲಿ ಬರುತ್ತದೆ. ಸಿಂಥೆಟಿಕ್ ಮಾದಕ ದಾಳಿ ಕಷ್ಟಕರ. ಎನ್‌ಡಿಪಿಎಸ್ ಇದೊಂದು ಕಠಿಣ ಕಾಯ್ದೆಯಾಗಿದೆ. ದಾಳಿ ನಡೆಸುವುದು, ತನಿಖೆ, ವಿಚಾರಣೆ ನಡೆಸುವ ಬಗ್ಗೆ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಕೋವಿಡ್‌ನಿಂದಾಗಿ ಪೊಲೀಸ್ ಇಲಾಖೆಯಲ್ಲೂ ಹಲವು ಬದಲಾವಣೆಗಳಾಗಿವೆ. ಈ ಮೊದಲು ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿ ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿತ್ತು. ಸದ್ಯ ಈ ಪ್ರಕ್ರಿಯೆ ಬದಲಾಗಿದ್ದು, ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲು ಆರಂಭಿಸಿದ್ದೇವೆ. ಇತ್ತೀಚೆಗೆ ವೀಡಿಯೊ ಕಾನ್ಫರೆನ್ಸ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಕಳೆದ ಆರು ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ಪೊಲೀಸ್ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಲಾಗಿದೆ. ಮುಂದಿನ ದಿನ ಗಳಲ್ಲೂ ಪ್ರಕರಣದ ಸಾಕ್ಷಗಳು ಕೂಡ ವೀಡಿಯೊ ಕಾನ್ಫರೆನ್ಸ್ ಮೂಲಕವೇ ದಾಖಲಾಗುವ ಸಾಧ್ಯತೆ ಇದೆ ಎಂದರು.

ಕೋವಿಡ್ ಸೋಂಕೂ ಇದೆ; ಪೊಲೀಸ್ ಕೆಲಸವೂ ನಡೆಯುತ್ತಿದೆ. ಪೊಲೀಸರು ಸಂಪೂರ್ಣ ಅಲರ್ಟ್ ಆಗಿದ್ದಾರೆ. ಪೊಲೀಸ್ ಪೇದೆಯಿಂದ ಹಿರಿಯ ಅಧಿಕಾರಿಗಳು ಕಳೆದ ಆರು ತಿಂಗಳು ಅವಿರತವಾಗಿ ಕರ್ತವ್ಯದಲ್ಲಿ ತೊಡಗಿದ್ದಾರೆ. ಪೊಲೀಸರು ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News