ಸಮುದ್ರ ಮಧ್ಯೆ 36 ಗಂಟೆ ಏಕಾಂಗಿಯಾದ ಮೀನುಗಾರ !

Update: 2020-09-08 17:48 GMT

ಉಳ್ಳಾಲ, ಸೆ. 8: ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗೆ ಕಟ್ಟಿದ್ದ ಸಣ್ಣ ದೋಣಿ ಸಮುದ್ರ ಮಧ್ಯೆ ಬೇರ್ಪಟ್ಟ ಪರಿಣಾಮ ಮೀನುಗಾರನೋರ್ವ 36 ಗಂಟೆ ಕಾಲ ಏಕಾಂಗಿಯಾಗಿ ಸಮುದ್ರದಲ್ಲಿ ಬಾಕಿಯಾದ ಘಟನೆ ನಡೆದಿದೆ.

ಉಳ್ಳಾಲ ಹೊಯ್ಗೆ ನಿವಾಸಿ ಸುನೀಲ್ ಅರ್ಥರ್ ಕುವೆಲ್ಲೊ(47) ಈ ರೀತಿ ಸಮುದ್ರ ಮಧ್ಯೆ ಒಂದೂವರೆ ದಿನ ಏಕಾಂಗಿಯಾಗಿ ಕಳೆದು ಇದೀಗ ಸುರಕ್ಷಿತವಾಗಿ ದಡ ಸೇರಿದ ಮೀನುಗಾರ.

ಘಟನೆಯ ವಿವರ: ಸುನೀಲ್ ಅರ್ಥರ್ ಸೇರಿದಂತೆ 29 ಮಂದಿ ಮೀನುಗಾರ ತಂಡವೊಂದು ‘ಫಾಲ್ಕಾನ್’ ಎಂಬ ಪರ್ಸೀನ್ ಬೋಟ್‌ನಲ್ಲಿ ಸೆ.6ರಂದು ಬೆಳಗ್ಗೆ ಮಂಗಳೂರು ಬಂದರ್‌ನಿಂದ ಮೀನುಗಾರಿಕೆಗೆ ಹೊರಟಿತ್ತು. ಈ ಬೋಟ್‌ಗೆ ಕಟ್ಟಿದ್ದ ಡಿಂಗಿ(ಸಣ್ಣ ದೋಣಿ)ಯಲ್ಲಿ ಸುನೀಲ್ ಸಹಿತ ಐವರು ಮೀನುಗಾರರಿದ್ದರು. ರಾತ್ರಿಯ ವೇಳೆ ಸಮುದ್ರ ತಟದಿಂದ 28 ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಆಳಸಮುದ್ರದಲ್ಲಿ ಭಾರೀ ಗಾಳಿ ಬೀಸಲು ಆರಂಭವಾಗಿತ್ತು. ಈ ವೇಳೆ ಫಾಲ್ಕಾನ್ ಪರ್ಸಿನ್ ಬೋಟ್ ತಾಂತ್ರಿಕ ತೊಂದರೆಗೀಡಾಗಿ ಕೆಟ್ಟು ನಿಂತಿತ್ತು. ಬಳಿಕ ಇನ್ನೊಂದು ಮೀನುಗಾರಿಕೆ ಬೋಟ್ ಸಹಾಯದಿಂದ ಫಾಲ್ಕಾನ್‌ನ್ನು ದಡಕ್ಕೆ ಎಳೆಯುವ ಕಾರ್ಯ ನಡೆದಿತ್ತು. ಈ ವೇಳೆ ಡಿಂಗಿಯಲ್ಲಿದ್ದವರ ಪೈಕಿ ನಾಲ್ವರು ಎದ್ದು ಪರ್ಸಿನ್ ಬೋಟ್‌ನ ಇಂಜಿನ್ ಕಡೆ ತೆರಳಿದ್ದರು. ಆದರೆ ಸುನೀಲ್ ಮಾತ್ರ ಡಿಂಗಿಯಲ್ಲಿದ್ದುಕೊಂಡು ಬಲೆ ಬೀಸುತ್ತಿದ್ದರೆನ್ನಲಾಗಿದೆ. ಬೋಟ್ ಮುಂದೆ ಸಾಗುತ್ತಿದ್ದಂತೆ ಅದಕ್ಕೆ ಕಟ್ಟಿದ್ದ ಡಿಂಗಿಯ ಹಗ್ಗ ತುಂಡಾಗಿದೆ. ಈ ಸಂದರ್ಭ ಸುನೀಲ್ ಜೋರಾಗಿ ಕೂಗಿದರೂ ಇಂಜಿನ್‌ನ ಶಬ್ದಕ್ಕೆ ಅವರ ಕೂಗು ಉಳಿದ ಮೀನುಗಾರರಿಗೆ ಕೇಳಿಸಲಿಲ್ಲ. ಅವರು ಸುನೀಲ್ ಕಡೆ ಗಮನಹರಿಸದೇ ಮಾಲಕರಿಗೆ ಬೋಟ್‌ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷ ಕಂಡು ಬಂದಿರುವ ಬಗ್ಗೆ ಮಾಹಿತಿ ನೀಡುವುದರಲ್ಲೇ ನಿರತರಾಗಿದ್ದರೆನ್ನಲಾಗಿದೆ. ಬಳಿಕ ಬೇರೆ ಬೋಟ್ ತರಿಸಿ ಅದರಲ್ಲಿದ್ದ ಮೀನುಗಾರರೆಲ್ಲ ವಾಪಸ್ ಆಗಿದ್ದರು. ಈ ವೇಳೆ ಡಿಂಗಿ ಜೊತೆ ನಾಪತ್ತೆಯಾಗಿರುವುದು ತಿಳಿದುಬಂದಿದೆ. ಅವರಿಗಾಗಿ ಮತ್ತೆ ಹುಡುಕಾಟ ನಡೆಸಿ ಪತ್ತೆ ಯಾಗದ ಕಾರಣ ಬೋಟ್ ಮಾಲಕ ದೇವು ಸೋಮವಾರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡಾ ದಾಖಲಿಸಿದ್ದರು.

ಈ ನಡುವೆ ಸುನೀಲ್ ಸಣ್ಣ ದೋಣಿಯಲ್ಲಿ ಸಮುದ್ರ ಮಧ್ಯೆ ಏಕಾಂಗಿಯಾಗಿ ಬಾಕಿಯಾಗಿದ್ದರು. ನೆರವಿಗೆ ಕರೆ ಮಾಡಲು ಅವರಲ್ಲಿ ಮೊಬೈಲ್ ಫೋನ್ ಇರಲಿಲ್ಲ. ಹೀಗೆ ಒಂದೂವರೆ ದಿನ ಕಳೆದ ಬಳಿಕ ಸೋಮವಾರ ಮಧ್ಯಾಹ್ನ ವೇಳೆ ಮಲ್ಪೆಯಿಂದ ಬಂದ ಬೋಟ್‌ವೊಂದನ್ನು ಗಮನಿಸಿದ ಸುನೀಲ್ ಬೈರಾಸ್ ಮೂಲಕ ಸಿಗ್ನಲ್ ನೀಡಿದರು. ಈ ವೇಳೆ ಇವರನ್ನು ನೋಡಿದ ಮಲ್ಪೆಬೋಟಿನವರು ರಕ್ಷಿಸಿದ್ದಾರೆ.

ನಾವು ಒಟ್ಟು 29 ಮಂದಿ ಸೆ.6ರಂದು ಮೀನುಗಾರಿಕೆಗೆ ತೆರಳಿದ್ದೆವು. ಜೋರು ಗಾಳಿ ಮಳೆ ಇದ್ದ ಕಾರಣ ಸೋಮವಾರ ಬೋಟ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು. ಈ ವೇಳೆ ನನ್ನ ಜೊತೆ ಡಿಂಗಿಯಲ್ಲಿದ್ದ 4 ಮಂದಿ ಎದ್ದು ಇಂಜಿನ್ ಕಡೆ ತೆರಳಿದರು. ಇಂಜಿನ್ ಸ್ಟಾರ್ಟ್ ಮಾಡುವ ಸಂದರ್ಭ ದೋಣಿಯ ಹಗ್ಗ ತುಂಡಾಗಿದೆ. ಈ ಸಂದರ್ಭ ನಾನು ಉಳಿದ ಮೀನುಗಾರರಿಗೆ ಕರೆದು ಸೂಚನೆ ನೀಡಿದರೂ ಅವರಿಗೆ ಕೇಳಿಸಲಿಲ್ಲ. ಸೋಮವಾರ ನಾನು ಇಲ್ಲದ ಬಗ್ಗೆ ಅವರ ಗಮನಕ್ಕೆ ಬಂದು ಹುಡುಕಾಡಿ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದರು. ರಾತ್ರಿ ವೇಳೆ ಹಡಗು ಕೂಡಾ ಹೋಗಿದೆ. ಆದರೂ ನನಗೆ ತೊಂದರೆ ಆಗಲಿಲ್ಲ. ಆಹಾರ ಇಲ್ಲದ ಕಾರಣ ಮಳೆಯ ನೀರನ್ನೇ ಆಶ್ರಯಿಸಿ ಬದುಕಿದ್ದೇನೆ. ರಕ್ಷಣೆ ಹೊಂದುವುದು ಹೇಗೆ ಎಂದು ದಾರಿ ಹುಡುಕುತ್ತಿದ್ದ ಸಂದರ್ಭ ಮಲ್ಪೆ ಯಿಂದ ಬಂದ ಬೋಟ್‌ನವರಿಗೆ ಬೈರಾಸ್‌ನ ಮೂಲಕ ಸಿಗ್ನಲ್ ಮಾಡಿದೆ. ಅವರು ತಕ್ಷಣ ಬಂದು ನನ್ನನ್ನು ರಕ್ಷಿಸಿದ್ದಾರೆ.
- ಸುನೀಲ್ ಅರ್ಥರ್ ಕುವೆಲ್ಲೊ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News