ಹಂತಕರ ಮರಣದಂಡನೆ ರದ್ದತಿ ನ್ಯಾಯಾಲಯದ ಇನ್ನೊಂದು ಪ್ರಹಸನ: ಸೌದಿ ಪತ್ರಕರ್ತನ ಗೆಳತಿ

Update: 2020-09-08 17:57 GMT

ಇಸ್ತಾಂಬುಲ್ (ಟರ್ಕಿ), ಸೆ. 8: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಪ್ರಕರಣದಲ್ಲಿ ಐವರಿಗೆ ನೀಡಲಾಗಿರುವ ಮರಣ ದಂಡನೆಗಳನ್ನು ಆ ದೇಶದ ನ್ಯಾಯಾಲಯವೊಂದು ರದ್ದುಪಡಿಸಿರುವುದು ಒಂದು ‘ಪ್ರಹಸನ’ವಾಗಿದೆ ಎಂದು ಖಶೋಗಿಯ ಗೆಳತಿ ಹಾತಿಸ್ ಸೆಂಗಿಝ್ ಹೇಳಿದ್ದಾರೆ.

‘‘ಸೌದಿ ಅರೇಬಿಯದಲ್ಲಿ ಇಂದು ನೀಡಲಾಗಿರುವ ತೀರ್ಪು ನ್ಯಾಯವನ್ನು ಮತ್ತೊಮ್ಮೆ ಅಣಕ ಮಾಡಿದಂತಾಗಿದೆ’’ ಎಂದು ಟರ್ಕಿ ಪ್ರಜೆಯಾಗಿರುವ ಸೆಂಗಿಝ್ ಸೋಮವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘‘ಈ ಪ್ರಹಸನವನ್ನು ಅಂತರ್‌ರಾಷ್ಟ್ರೀಯ ಸಮುದಾಯ ಸ್ವೀಕರಿಸುವುದಿಲ್ಲ’’ ಎಂದಿದ್ದಾರೆ.

ಖಶೋಗಿ ಹಂತಕರನ್ನು ನಾವು ಕ್ಷಮಿಸಿದ್ದೇವೆ ಎಂಬುದಾಗಿ ಅವರ ಪುತ್ರರು ಮೇ ತಿಂಗಳಲ್ಲಿ ಘೋಷಿಸಿದ ಬಳಿಕ ಸೌದಿ ಅರೇಬಿಯದ ನ್ಯಾಯಾಲಯವು ಐವರು ದೋಷಿಗಳ ಮರಣ ದಂಡನೆಗಳನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸಿ ತೀರ್ಪು ನೀಡಿದೆ.

ನ್ಯಾಯಾಲಯವು ತನ್ನ ಅಂತಿಮ ತೀರ್ಪಿನಲ್ಲಿ ಯಾವುದೇ ದೋಷಿಯ ಹೆಸರನ್ನು ಉಲ್ಲೇಖಿಸಿಲ್ಲ.

ಖಶೋಗಿಯನ್ನು 2018 ಅಕ್ಟೋಬರ್ 2ರಂದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಸೌದಿ ಅರೇಬಿಯದ ಗುಪ್ತಚರ ಅಧಿಕಾರಿಗಳ ತಂಡವೊಂದು ಅಮಾನುಷವಾಗಿ ಕೊಂದಿದೆ ಎಂದು ಟರ್ಕಿ ಆರೋಪಿಸಿದೆ.

ಪಾರದರ್ಶಕತೆ, ಉತ್ತರದಾಯಿತ್ವ ನಿಗದಿಯ ಕೊರತೆ: ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ

ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆ ಬಗ್ಗೆ ಸೌದಿ ಅರೇಬಿಯ ನಡೆಸಿರುವ ವಿಚಾರಣೆಯಲ್ಲಿ ಪಾರದರ್ಶಕತೆಯ ಕೊರತೆಯಿದೆ ಹಾಗೂ ಅಪರಾಧಕ್ಕೆ ಉತ್ತರದಾಯಿತ್ವ ನಿಗದಿಪಡಿಸುವಲ್ಲಿ ಅದು ವಿಫಲವಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿ ಮಂಗಳವಾರ ಹೇಳಿದೆ.

ಮರಣ ದಂಡನೆಯನ್ನು ವಿಶ್ವಸಂಸ್ಥೆ ವಿರೋಧಿಸುತ್ತದೆ ಎಂದು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿಯ ವಕ್ತಾರ ರೂಪರ್ಟ್ ಕಾಲ್ವಿಲ್, ‘‘ಈ ಪ್ರಕರಣದ ವಿಚಾರಣೆಯಲ್ಲಿ ಸರಿಯಾದ ಪಾರದರ್ಶಕತೆಯಿರಲಿಲ್ಲ, ಹತ್ಯೆಗೆ ಕಾರಣರಾದವರನ್ನು ಶಿಕ್ಷಿಸಬೇಕು ಹಾಗೂ ಅವರ ಅಪರಾಧಕ್ಕೆ ತಕ್ಕ ಶಿಕ್ಷೆಯಾಗಬೇಕು’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News