×
Ad

ಮುಂದಿನ ವಾರ ನಡೆಯಲಿದ್ದ ಕೋವಿಡ್ ಲಸಿಕೆ ಪ್ರಯೋಗ ಸ್ಥಗಿತಗೊಳಿಸಿದ ಸೆರಮ್ ಇನ್‍ಸ್ಟಿಟ್ಯೂಟ್

Update: 2020-09-10 17:54 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ. 10: ಆಕ್ಸ್‌ಫರ್ಡ್ ಕೋವಿಡ್-19 ಕ್ಲಿನಿಕಲ್ ಟ್ರಯಲ್ ಅನ್ನು ಸ್ಥಗಿತಗೊಳಿಸದೇ ಇರುವುದಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ನೋಟಿಸು ಸ್ವೀಕರಿಸಿದ ದಿನದ ಬಳಿಕ, ಅಸ್ಟ್ರಾಝೆನೆಕಾ ಕ್ಲಿನಿಕಲ್ ಟ್ರಯಲ್‌ಗಳನ್ನು ಮರು ಆರಂಭಿಸುವ ವರೆಗೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಅನ್ನು ನಿಲ್ಲಿಸಲಾಗುವುದು ಎಂದು ಘೋಷಿಸಿದೆ.

‘‘ನಾವು ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ. ಅಲ್ಲದೆ, ಅಸ್ಟ್ರಾಝೆನೆಕಾ ತನ್ನ ಕ್ಲಿನಿಕಲ್ ಟ್ರಯಲ್ ಅನ್ನು ಮರು ಆರಂಭಿಸುವ ವರೆಗೆ ಕ್ಲಿನಿಕಲ್ ಟ್ರಯಲ್ ಅನ್ನು ನಿಲ್ಲಿಸುತ್ತೇವೆ. ನಾವು ಡಿಸಿಜಿಐಯ ಸೂಚನೆಯನ್ನು ಪಾಲಿಸುತ್ತೇವೆ. ಆದರೆ, ಕ್ಲಿನಿಕಲ್ ಟ್ರಯಲ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಲು ಸಾಧ್ಯವಿಲ್ಲ. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗೆ ನೀವು ಡಿಸಿಜಿಐಯನ್ನು ಸಂಪರ್ಕಿಸಿ’’ ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಗುರುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕೊರೋನ ವೈರಸ್‌ಗೆ ಕಂಡು ಹಿಡಿಯಲಾಗಿದ್ದ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸಂದರ್ಭ ಸ್ವಯಂ ಸೇವಕರಲ್ಲಿ ಪ್ರತಿಕೂಲ ಪ್ರತಿಕ್ರಿಯೆ ಕಂಡು ಬಂದ ಹಿನ್ನೆಲೆಯಲ್ಲಿ ಬ್ರಿಟನ್ ಮೂಲದ ಕಂಪೆನಿ ಅಸ್ಟ್ರಾಝೆನೆಕಾ ಕ್ರಿನಿಕಲ್ ಟ್ರಯಲ್ ಅನ್ನು ಸ್ಥಗಿತಗೊಳಿಸಿತ್ತು. ಅಸ್ಟ್ರಾಝೆನಕಾ ಆಕ್ಸ್‌ಫಡ್ ವಿಶ್ವವಿದ್ಯಾನಿಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಹಾಗೂ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾದ ಬಳಿಕ ಭಾರತದಲ್ಲಿ ಕೊರೋನ ಲಸಿಕೆಯನ್ನು ಉತ್ಪಾದಿಸಲು ಭಾರತೀಯ ಕಂಪೆನಿಯೊಂದಿಗೆ ಪಾಲುದಾರಿಕೆ ಹೊಂದಿದೆ.

ವಿದೇಶದಲ್ಲಿ ಕೊರೋನ ಲಸಿಕೆಯ ಕ್ಲಿನಿಕಲ್ ಟ್ರಯಲ್ ಅನ್ನು ನಿಲ್ಲಿಸಿದ ಹೊರತಾಗಿಯೂ ತಾವು ಕ್ಲಿನಿಕಲ್ ಟ್ರಯಲ್ ಅನ್ನು ಮುಂದುವರಿಸಲಾಗುವುದು ಎಂದು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬುಧವಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಬುಧವಾರ ನೋಟಿಸು ಜಾರಿ ಮಾಡಿತ್ತು. ಅನಂತರ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ, ‘‘ಇಂಗ್ಲೆಂಡ್‌ನ ಕ್ಲಿನಿಕಲ್ ಟ್ರಯಲ್ ಬಗ್ಗೆ ನಾವು ಹೆಚ್ಚೇನು ಹೇಳಲು ಸಾಧ್ಯವಿಲ್ಲ. ಆದರೆ, ನಾವು ಮುಂದಿನ ಪರಿಶೀಲನೆ ವರೆಗೆ ಕ್ಲಿನಿಕಲ್ ಟ್ರಯಲ್ ಅನ್ನು ಸ್ಥಗಿತಗೊಳಿಸಲಿದ್ದೇವೆ. ಈ ಕ್ಲಿನಿಕಲ್ ಟ್ರಯಲ್ ಶೀಘ್ರ ಆರಂಭವಾಗುವ ನಿರೀಕ್ಷೆ ಇದೆ’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News