ಕಾಜರಹಳ್ಳಿ ಅನಿಷಾ ಪೂಜಾರಿ ಸಾವಿನ ಪ್ರಕರಣ: ಸಿಓಡಿ ತನಿಖೆಗಾಗಿ ತಾಯಿಯಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ

Update: 2020-09-10 12:30 GMT

ಬ್ರಹ್ಮಾವರ, ಸೆ.10: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿದ್ಯಾರ್ಥಿನಿ ಅನಿಷಾ ಪೂಜಾರಿ(26) ಸಾವಿನ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಮೃತರ ತಾಯಿ ಪ್ರೇಮಾ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬ್ರಹ್ಮಾವರ ತಾಲೂಕಿನ ಸಾಬರಕಟ್ಟೆ ಕಾಜರಹಳ್ಳಿಯ ನಿವಾಸಿಗಳಾದ ಅನಿಷಾ ಹಾಗೂ ಚೇತನ್ ಶೆಟ್ಟಿ(30) ಪರಸ್ಪರ ಪ್ರೀತಿಸುತ್ತಿದ್ದು, ಪ್ರೀತಿಯ ಹೆಸರಿನಲ್ಲಿ ಚೇತನ್ ಶೆಟ್ಟಿ ಮೋಸ ಮಾಡಿರುವುದಾಗಿ ಮರಣಪತ್ರ ಬರೆದಿಟ್ಟ ಅನಿಷಾ, ಆರೋಪಿಯ ಮನೆಯ ಜಾಗದಲ್ಲಿಯೇ ಆ.21ರಂದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬ್ರಹ್ಮಾವರ ಪೊಲೀಸರು, ತಲೆ ಮರೆಸಿಕೊಂಡಿದ್ದ ಆರೋಪಿ ಚೇತನ್ ಶೆಟ್ಟಿಯನ್ನು ಸೆ.2ರಂದು ಬೆಂಗಳೂರಿನ ಚಂದ್ರ ಲೇಔಟ್ ಎಂಬಲ್ಲಿ ವಶಕ್ಕೆ ಪಡೆದು ಬಂಧಿಸಿದ್ದರು. ಇದೀಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯ ಜಾಮೀನು ಅರ್ಜಿಯ ಅಂತಿಮ ಆದೇಶವನು್ನ ನ್ಯಾಯಾಲಯ ಸೆ.14ರಂದು ನೀಡಲಿದೆ.

ಈ ಸಂಬಂಧ ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ತಾಯಿ ಪ್ರೇಮಾ, ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಡೆಸುವಂತೆ ನ್ಯಾಯವಾದಿ ದಿಲ್‌ರಾಜ್ ರೋಹಿತ್ ಸಿಕ್ವೇರಾ ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಸೆ.3 ರಂದು ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News