×
Ad

ಇತಿಹಾಸದ ಪುಟ ಸೇರಿದ ಗುರುಪುರ ಹಳೆಯ ಸೇತುವೆ !

Update: 2020-09-10 18:08 IST

ಮಂಗಳೂರು, ಸೆ.10: ಗುರುಪುರ ಹಳೆ ಸೇತುವೆಯು ಇತಿಹಾಸದ ಪುಟ ಸೇರಿದೆ. ಅಂದರೆ, ಹೊಸ ಸೇತುವೆಯ ಲೋಕಾರ್ಪಣೆಯ ಬಳಿಕ ಹಳೆ ಸೇತುವೆಯ ಎರಡೂ ಪ್ರವೇಶದ್ವಾರಕ್ಕೆ ಅಡ್ಡವಾಗಿ ಕೆಂಪುಕಲ್ಲಿನಿಂದ ತಡೆಗೋಡೆ ಕಟ್ಟಲಾಗಿದೆ.

ಹಳೆಯ ಸೇತುವೆಯ ‘ಧಾರಣಾ ಸಾಮರ್ಥ್ಯ’ ಸಂಚಾರಕ್ಕೆ ಪೂರಕವಾಗಿಲ್ಲ. ಹಾಗಾಗಿ ಹೊಸ ಸೇತುವೆ ನಿರ್ಮಿಸಬೇಕು ಎಂಬ ಆಗ್ರಹ ಕೇಳಿ ಬಂದ ಹಿನ್ನೆಲೆಯಲ್ಲಿ 2019ರಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದು 2020ರಲ್ಲಿ ಲೋಕಾರ್ಪಣೆಗೊಂಡಿತ್ತು. ಬಳಿಕ ವಾಹನ ಸಂಚಾರವಿಲ್ಲದೆ ಅನಾಥವಾಗಿದ್ದ ಬ್ರಿಟಿಷರ ಕಾಲದ ಹಳೆ ಸೇತುವೆಯು ಇದೀಗ ಇತಿಹಾಸದ ಪುಟ ಸೇರಿದೆ.

ಹೊಸ ಸೇತುವೆಯ ಉದ್ಘಾಟನೆ ಸಂದರ್ಭ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದ ಸ್ಥಳೀಯ ಶಾಸಕ ಡಾ. ಭರತ್ ಶೆಟ್ಟಿ ‘ಮತ್ತೊಮ್ಮೆ ಸೇತುವೆಯ ಧಾರಣಾ ಶಕ್ತಿ ಪರೀಕ್ಷಿಸಿ, ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡುವ ವಿಷಯದಲ್ಲಿ ಚರ್ಚಿಸಲಾಗುವುದು’ ಎಂದಿದ್ದರು. ಆದರೀಗ ಸೇತುವೆಯ ಎರಡೂ ಪಾರ್ಶ್ವದಲ್ಲಿ ತಡೆಗೋಡೆ ನಿರ್ಮಿಸಿ ಸಂಪೂರ್ಣ ಬಂದ್ ಮಾಡುವ ಮೂಲಕ ಇತಿಹಾಸದ ಪುಟಕ್ಕೆ ಸೇರಿಸುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ.

1923ರಲ್ಲಿ ನಿರ್ಮಿಸಲಾಗಿದ್ದ ಹಳೆ ಸೇತುವೆಯು 100 ವರ್ಷ ಸಾರ್ವಜನಿಕ ಸಾರಿಗೆ ಸಂಪರ್ಕ ಸೇತುವಾಗಿ ಕೆಲಸ ಮಾಡಿದೆ. ಇದರಲ್ಲಿ ಅಸಾಮಾನ್ಯ ಭಾರ ಹೊತ್ತ ವಾಹನಗಳೂ ಸಂಚರಿಸಿವೆ. ಆದರೆ ಸೇತುವೆಗೆ ಏನೂ ಆಗಿಲ್ಲ. ಹಳೆ ಸೇತುವೆಯಲ್ಲಿ ಇನ್ನೂ ಕೆಲವು ವರ್ಷ ದ್ವಿಚಕ್ರ, ತ್ರಿಚಕ್ರದಂತಹ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು. ಆದರೆ ಒಮ್ಮೆ ಬಂದ್ ಮಾಡಲಾದ ಸೇತುವೆಯಲ್ಲಿ ಒಂದು ವರ್ಷದ ಬಳಿಕ ಮತ್ತೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಅಪಾಯ ಆಹ್ವಾನಿಸಿದಂತಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

‘ಹೊಸ ಸೇತುವೆ ನಿರ್ಮಾಣದೊಂದಿಗೆ ಹಳೆ ಸೇತುವೆಯನ್ನು ಮುಚ್ಚುತ್ತೇವೆ. ಬ್ರಿಟಿಷರ ಕಾಲದ ಗುರುಪುರದ ಸೇತುವೆಯು ಅಪೂರ್ವವಾಗಿದ್ದರೂ ಇಂತಹ ಯಾವುದೇ ಸೇತುವೆಗಳನ್ನು ಸ್ಮಾರಕವಾಗಿ ಉಳಿಸಿಕೊಳ್ಳುವ ಅವಕಾಶ ಇಲಾಖೆಯಲ್ಲಿಲ್ಲ. ಪ್ರಾಚ್ಯವಸ್ತು (ಆರ್ಕೆಲಾಜಿಕಲ್ ಡಿಪಾರ್ಟ್‌ಮೆಂಟ್) ಇಲಾಖೆಯಲ್ಲಿ ಅಂತಹ ಅವಕಾಶವಿದ್ದು, ಆ ಬಗ್ಗೆ ನಾವೇನೂ ಹೇಳುವಂತಿಲ್ಲ. ವಾಹನ ಸಂಚಾರ ನಿಷೇಧಿಸಿ ಮುಚ್ಚಲಾಗುವ ಸೇತುವೆಗಳು ಕ್ರಮೇಣ ಶಿಥಿಲಗೊಂಡು ಕುಸಿಯುತ್ತವೆ’ ಎಂದು ರಾಷ್ಟ್ರೀಯ ಹೆದ್ದಾರಿ ಡಿವಿಜನ್ ಮಂಗಳೂರು ಇದರ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಣಪತಿ ನಾರಾಯಣ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News