ಭಾರೀ ಮಳೆಗೆ ಮತ್ತೆ ಮಂಗಳೂರು ಜಲಾವೃತ
ಮಂಗಳೂರು, ಸೆ.10: ನಗರದಲ್ಲಿ ಬುಧವಾರ ರಾತ್ರಿಯಿಂದಲೇ ಆರಂಭವಾದ ಮಳೆಯು ಗುರುವಾರ ರಾತ್ರಿಯವರೆಗೂ ಮುಂದುವರಿದಿತ್ತು. ದಿನವಿಡೀ ಸುರಿದ ಭಾರೀ ಮಳೆಗೆ ಮತ್ತೆ ಜನತೆ ಬೆಚ್ಚಿ ಬಿದ್ದಿದ್ದಾರೆ. ನಗರದ ವಿವಿಧೆಡೆ ಕೃತಕ ನೆರೆಯಿಂದಾಗಿ, ಮನೆ ಅಂಗಡಿಗಳಿಗೆ ನೀರು ನುಗ್ಗಿ, ಜನ ಜೀನವ ಅಸ್ತವ್ಯಸ್ತವಾಗಿದೆ.
ಪ್ರತಿ ವರ್ಷ ಕೃತಕ ನೆರೆಯುಂಟಾಗುವ ಪ್ರದೇಶಗಳಲ್ಲೇ ಮತ್ತೆ ನೆರೆ ಬಂದಿದ್ದು, ಪಾಲಿಕೆ ಎರಡನೇ ಅವಧಿಯ ಹೂಳು ತೆಗೆಯದೆ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಟ್ಟಾರಚೌಕಿ, ಮಾಲೆಮಾರ್ ಪ್ರದೇಶದಲ್ಲಿ ನೆರೆಯಿಂದಾಗಿ ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಯಿಂದ ನೀರು ಉಕ್ಕಿ ರಸ್ತೆಯಲ್ಲಿ ಹರಿದಿದೆ. ಇದರಿಂದಾಗಿ ನಗರದಿಂದ ಹೆದ್ದಾರಿಗೆ ಪ್ರವೇಶಿಸುವ ರಸ್ತೆಯಲ್ಲಿ ಸಾಯಂಕಾಲ ವಾಹನಗಳು ಸಾಲುಗಟ್ಟಿ ನಿಂತು ಕೆಲಹೊತ್ತು ರಸ್ತೆ ಬ್ಲಾಕ್ ಉಂಟಾಗಿತ್ತು.
ಅಳಕೆ, ಕುದ್ರೋಳಿ, ಮಣ್ಣಗುಡ್ಡ, ಕೊಡಿಯಾಲ್‌ಬೈಲ್, ಜನತಾಡಿಲಕ್ಸ್ ಹೋಟೆಲ್, ಎಂಪಾಯರ್ ಮಾಲ್‌ಬಳಿ ಸೇರಿದಂತೆ ತಗ್ಗು ಪ್ರದೇಶದ ವಿವಿಧೆಡೆ ರಾಜಕಾಲುವೆ ನೀರು ರಸ್ತೆಗೆ ಬಂದಿದೆ. ಹಲವು ಮನೆಗಳ ಅಂಗಳದ ವರೆಗೆ ನೀರು ಬಂದು ಭೀತಿಯ ವಾತಾವರಣ ಉಂಟಾಯಿತು. ವಸತಿ ಸಮುಚ್ಚಯಗಳ ತಳ ಅಂತಸ್ತುಗಳಿಗೂ ನೀರು ನುಗ್ಗಿದೆ. ಕದ್ರಿ-ನಂತೂರು ಮುಖ್ಯರಸ್ತೆ ಬದಿಯಲ್ಲಿ ಕಲ್ಲಿನಿಂದ ಕಟ್ಟಿದ ಧರೆಯೊಂದು ಜರಿದು ಬಿದ್ದಿದೆ.
ಒಳರಸ್ತೆಗಳಲ್ಲಿ ಒಂಡೆರಡು ಅಡಿಗಳಷ್ಟು ಎತ್ತರ ನೀರು ನಿಂತು ಲಘುವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಜತೆಗೆ ಒಳಚರಂಡಿ ನೀರು ಉಕ್ಕೇರಿ ರಸ್ತೆಯಲ್ಲಿ ಹರಿದಿದ್ದು, ಕೆಲವು ಮನೆಗಳ ಶೌಚಗೃಹದಲ್ಲಿ ಚರಂಡಿ ನೀರು ಹೊರಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಳೂರು ಬಳಿ ಗುರುಪುರ ನದಿ ಸೇತುವೆ ಗುಂಡಿ ಬಿದ್ದು ವಾಹನಗಳು ನಿಧಾನವಾಗಿ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಹೆದ್ದಾರಿ ರಾತ್ರಿ ವೇಳೆ ಬ್ಲಾಕ್ ಆಗಿತ್ತು.
ಅಂಗಡಿ-ಮನೆಗಳಿಗೆ ನೀರು
ಮಂಗಳೂರು ನಗರದಲ್ಲಿ ಕೃತಕ ನೆರೆಗೆ ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನರು ಸಂಕಷ್ಟ ಅನುಭವಿಸಿದರು. ಅಳಕೆ, ಕುದ್ರೋಳಿ, ಕೊಟ್ಟಾರ ಚೌಕಿ, ಮಾಲೆಮಾರ್, ಮಣ್ಣಗುಡ್ಡ, ಕೊಡಿಯಾಲ್ ಬೈಲ್‌ನ ಜನತಾ ಡಿಲಕ್ಸ್ ಹೋಟೆಲ್, ಎಂಪಾಯರ್ ಮಾಲ್‌ಬಳಿ ಸೇರಿದಂತೆ ತಗ್ಗು ಪ್ರದೇಶದ ವಿವಿಧೆಡೆ ತೋಡುಗಳಲ್ಲಿ ನೀರು ಹರಿಯಲು ಸಾಧ್ಯವಾದೆ ರಸ್ತೆಗಳಲ್ಲಿ ಹರಿದಿದೆ. ಅಂಗಡಿ, ಮನೆಗಳಿಗೂ ನೀರು ನುಗ್ಗಿದೆ.
ಮಂಗಳೂರು, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಭಾರಿ ಮಳೆ ಸುರಿದಿದೆ. ಬೆಳಗ್ಗಿನಿಂದ ಸಾಯಂಕಾಲದ ವರೆಗಿನ ಅಂಕಿ ಅಂಶದಂತೆ ಮೂಡುಬಿದಿರೆಯಲ್ಲಿ ಅತ್ಯಧಿಕ 69.5ಮಿ.ಮೀ., ಬೆಳ್ತಂಗಡಿ ನಾವೂರಿನಲ್ಲಿ 64.5 ಮಿ.ಮೀ. ಮಳೆ ಸುರಿದಿದೆ. ಗ್ರಾಮಾಂತರ ಭಾಗದಲ್ಲಿ ಮಳೆಯಿಂದಾಗಿ ತೋಡು, ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕೆಲವೆಡೆ ಪ್ರವಾಹ ಭೀತಿಯೂ ಉಂಟಾಗಿದೆ. ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿರುವುದರಿಂದ, ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.