ಪತ್ರಿಕೆಗಳು ಸಮಾಜದ ಧ್ವನಿಯಾಗಿ ಕೆಲಸ ಮಾಡುತ್ತಿದೆ : ಮೀನಾಕ್ಷಿ ಶಾಂತಿಗೋಡು
ಪುತ್ತೂರು: ಯಾವುದೇ ವಿಚಾರಗಳ ಸತ್ಯಾಸತ್ಯತೆಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಸ್ಯೆಗಳು ಬಂದಾಗ ಅವರ ಧ್ವನಿಯಾಗಿ ಕೆಲಸ ಮಾಡುತ್ತಿದೆ ಎಂದು ದ.ಕ.ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ಗುರುವಾರ ನಗರದ ಬನ್ನೂರು ಜೈನರಗುರಿ ಎಂಬಲ್ಲಿ ಪುತ್ತೂರಿನಲ್ಲಿ ಆರಂಭಗೊಂಡ ನ್ಯೂಸ್ 3 ಚಾನೆಲ್ ಅವರ `ಕರಾವಳಿ ಸಂಕುಲ' ನೂತನ ವಾರ ಪತ್ರಿಕಾ ಬಿಡುಗಡೆ ಸಮಾರಂಭದಲ್ಲಿ ಪತ್ರಿಕೆಯ ಲೋಗೋ ಬಿಡುಗಡೆಗೊಳಿಸಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಕ್ಷಣದಲ್ಲಿ ಸುದ್ದಿ ಸಿಗಬೇಕೆಂಬ ಕಾತುರತೆಯಿಂದ ಜನರು ಸಹನೆ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಬದಲ್ಲಿ ಜನರಿಗೆ ಸರಿಯಾದ ಸುದ್ದಿಯನ್ನು ತಿಳಿದುಕೊಳ್ಳಲು ಪತ್ರಿಕೆಯನ್ನೇ ಅವಲಂಬಿಸಿಕೊಳ್ಳಬೇಕಾಗಿದೆ. ನೂತನ ಪತ್ರಿಕೆಯು ರಾಜಕೀಯ ರಹಿತವಾಗಿ ಸುದ್ದಿ ಯನ್ನು ಪ್ರಕಟಿಸಿ ಜನ ಮನವನ್ನು ತಲುಪುವಂತಾಗಲಿ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ ಸಮಾಜದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾಗಿದ್ದು, ಪಾರದರ್ಶಕ ವರದಿಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಪತ್ರಿಕೆಗಳಿಂದ ನಡೆಯಬೇಕಾಗಿದೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಬೆಳೆಯುತ್ತಿರುವ ಪುತ್ತೂರಿಗೆ ಪತ್ರಿಕೆಗಳ ಅಗತ್ಯವಿದ್ದು, ಪತ್ರಿಕೆಗಳ ಮೂಲಕ ಸಮಾಜದಲ್ಲಿನ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸುವ ಕೆಲಸವಾಗಬೇಕು. ಪುತ್ತೂರನ್ನು ಜಿಲ್ಲೆಯಾಗಿಸುವ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ನೂತನ ಪತ್ರಿಕೆ ಧ್ವನಿಯಾಗಲಿ. ಪತ್ರಿಕೆಯ ಮೂಲಕ ಪುತ್ತೂರು ಜಿಲ್ಲೆಯ ಆಂದೋಲನ ನಡೆಯಲಿ ಎಂದರು.
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ನೂತನ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ನಗರಸಭಾ ಸದಸ್ಯೆ ಗೌರಿ ಬನ್ನೂರು, ಮಾಜಿ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ, ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ಜೆಡಿಎಸ್ ತಾಲೂಕು ಸಮಿತಿ ಅಧ್ಯಕ್ಷ ಅಶ್ರಫ್ ಕಲ್ಲೇಗ, ಉದ್ಯಮಿ ರವಿ ಕಕ್ಕೆಪದವು ಮಾತನಾಡಿದರು.
ಈ ಸಂದರ್ಭದಲ್ಲಿ ಕರಾವಳಿ ಸಂಕುಲ ಪತ್ರಿಕೆ ಬಿಡುಗಡೆಗೆ ಸಂಬಂಧಿಸಿ ಆನ್‍ಲೈನ್ ಮೂಲಕ ನಡೆಸಲಾಗಿದ್ದ ಸೂಪರ್ ಟ್ಯಾಲೆಂಟ್ ಮಕ್ಕಳ ಸ್ಪರ್ಧಾ ವಿಜೇತರಿಗೆ ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಲಾಯಿತು.
ಪತ್ರಿಕೆಯ ಸಿಇಒ ಸತೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹರ್ಷಿತ್ ಪಡ್ರೆ ಸ್ವಾಗತಿಸಿದರು. ಪತ್ರಿಕೆಯ ಸಂಪಾದಕ ಅಕ್ಷಯ್ ಬಳ್ಳಮಲು ವಂದಿಸಿದರು. ಚೈತನ್ಯ ಕೊಟ್ಟಾರಿ ನಿರೂಪಿಸಿದರು.