×
Ad

ಮಂಗಳೂರು : ಹೋಂಸ್ಟೇ ನೋಂದಣಿ ಕಡ್ಡಾಯ

Update: 2020-09-10 23:19 IST

ಮಂಗಳೂರು, ಸೆ.10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳ ಪರಿಣಾಮಕಾರಿ ಉತ್ತೇಜನ ಹಾಗೂ ಆರ್ಥಿಕ ಪ್ರೋತ್ಸಾಹ ಕ್ಕಾಗಿ ಸ್ಥಳೀಯ ಸಂಸ್ಕೃತಿ, ಕಲೆಗಳನ್ನು ಪರಿಚಯಿಸಿ ಊಟೋಪಚಾರದೊಂದಿಗೆ ಆತಿಥ್ಯ ಒದಗಿಸಲು ಸುಮಾರು 32 ಹೋಂ-ಸ್ಟೇ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಹೋಂಸ್ಟೇ ನೋಂದಣಿಗಾಗಿ ಪೊಲೀಸ್ ಠಾಣೆ ಹಾಗೂ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಂದ ನಿರಾಪೇಕ್ಷಣಾ ಪತ್ರ ಪಡೆದು ಪ್ರವಾಸೋದ್ಯಮ ಇಲಾಖೆಯಿಂದ ನಿಯಮಬದ್ಧವಾಗಿ ಆನ್‌ಲೈನ್ ತಂತ್ರಾಂಶದಲ್ಲಿ ನೋಂದಾಯಿಸಿ ಅನುಮತಿ ಪಡೆದು ಕಾರ್ಯಾರಂಭ ಮಾಡುವುದು ಕಡ್ಡಾಯವಾಗಿದೆ.

ಹೋಂಸ್ಟೇಗಳನ್ನು ಪೇಯಿಂಗ್ ಗೆಸ್ಟ್ (ಪಿ.ಜಿ.) ಹಾಸ್ಟೆಲ್ ಅಥವಾ ಸರ್ವೀಸ್ ಅಪಾರ್ಟ್‌ಮೆಂಟ್ ಇತರ ವಸತಿಗಳಿಗೆ ಹೋಲಿಸಲಾಗುವುದಿಲ್ಲ. ರಾಜ್ಯ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) ಅಧಿನಿಯಮ-2015ರ ಅನ್ವಯ ಪ್ರವಾಸೋದ್ಯಮ ಇಲಾಖೆಯ ನೋಂದಣಿ ಪಡೆಯದೆ ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಅಂತಹ ಹೋಂಸ್ಟೇಗಳನ್ನು ಅನಧಿಕೃತ ಎಂದು ಭಾವಿಸಿ ಕ್ರಮ ಕೈಗೊಳ್ಳಲಾಗುವುದು.

ಅಧಿಕೃತ ಪರವಾನಿಗೆಯನ್ನು ಪಡೆದಿದ್ದರೂ ಯಾವುದೇ ಅನಧಿಕೃತ, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಲ್ಲಿ ಭಾರತೀಯ ದಂಡ ಸಂಹಿತೆಯ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಸ್ಥಳೀಯ ನಿವಾಸಿ, ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ, ಸಾರ್ವಜನಿಕರ ಹಿತಕ್ಕೆ ಧಕ್ಕೆಯಾ ಗದಂತೆ ಕಾರ್ಯ ನಿರ್ವಹಿಸಬೇಕಾಗಿರುತ್ತದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಪಡೆಯದೇ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳಾಗಲಿ ಅಥವಾ ಅನುಮತಿ ಪಡೆದಿದ್ದರೂ ಅಕ್ರಮ, ನಿಯಮಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಲ್ಲಿ ಅಂತಹ ಹೋಮ್-ಸ್ಟೇಗಳನ್ನು ಪತ್ತೆ ಹಚ್ಚಿ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News