ನಿವೃತ್ತ ಪೊಲೀಸ್ ಸಬ್ ಇನ್ಸ್'ಪೆಕ್ಟರ್ ವಿ. ಮುಹಮ್ಮದ್ ನಿಧನ

Update: 2020-09-10 18:32 GMT

ಮಂಗಳೂರು : ಬಂದರು ಟ್ರಾಫಿಕ್ ಪೊಲೀಸ್ ಠಾಣೆಯ ನಿವೃತ್ತ ಪೊಲೀಸ್ ಸಬ್ ಇನ್ಸ್'ಪೆಕ್ಟರ್ ಹಾಜಿ ವಿ. ಮಹಮ್ಮದ್ ವಿಟ್ಲ (79) ಅವರು ಇಂದು ರಾತ್ರಿ 10.35ಕ್ಕೆ ಆಸ್ಪತ್ರೆಯಿಂದ ಮನೆಗೆ ಬರುವ ಹಾದಿಯಲ್ಲಿ ಆಂಬುಲೆನ್ಸ್ ನಲ್ಲಿ ನಿಧನರಾದರು.

ಶುಕ್ರವಾರ ಜುಮಾ ಮೊದಲು ಬಜ್ಪೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೂಲತಃ ವಿಟ್ಲ ಸಮೀಪದ ಮಾರ್ನೆಮಿಗುಡ್ಡೆ ನಿವಾಸಿಯಾಗಿದ್ದ ವಿ. ಮಹಮ್ಮದ್ ಹಾಜಿ ಕಳೆದ 27 ವರ್ಷಗಳಿಂದ ಬಜ್ಪೆಯಲ್ಲಿ ನೆಲೆಸಿದ್ದರು. ವಿಟ್ಲದ ಜನತೆಗೆ 'ಪೊಲೀಸ್ ಮೋನಿಚ್ಚ' ಎಂದೇ ಚಿರಪರಿಚಿತರಾಗಿದ್ದ ಅವರು ಸ್ನೇಹಜೀವಿಯಾಗಿದ್ದರು. ಸಂಘಟನಾತ್ಮಕವಾಗಿ ಧಾರ್ಮಿಕ ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದರು. ಮಂಗಳೂರು ಪೊಲೀಸ್ ಲೈನ್ ಬಳಿಯಿರುವ ಸೈದಾನ್ ಬೀವಿ ದರ್ಗಾದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮೂಳೂರು ಮರ್ಕಝುಲ್ ತಹ್ಲೀಮುಲ್ ಇಹ್ಸಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಜ್ಪೆ ಕೇಂದ್ರ ಜುಮಾ ಮಸೀದಿಯಲ್ಲಿ ಹಲವು ವರ್ಷ ಅಧ್ಯಕ್ಷರಾಗಿದ್ದರು. ವಿಟ್ಲ ಜುಮಾ ಮಸೀದಿಯಲ್ಲಿ ಈ ಹಿಂದೆ ಗೌರವಾಧ್ಯಕ್ಷರಾಗಿದ್ದರು. ಮಂಗಳೂರು ಹಜ್ ನಿರ್ವಹಣಾ ಸಮಿತಿಯಲ್ಲೂ ಸದಸ್ಯರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

''ಹೆಚ್ಚಾಗಿ ಸೂಟ್ ಡ್ರೆಸ್ ಧರಿಸುತ್ತಿದ್ದ ಮಹಮ್ಮದ್ ಹಾಜಿ ಸದಾ ನಗುಮುಖದ ವ್ಯಕ್ತಿತ್ವ. ಜೊತೆಗೆ ಗಾಂಭೀರ್ಯವೂ ಇತ್ತು. ಹಜ್ ನಿರ್ವಹಣಾ ಸಮಿತಿಯಲ್ಲಿ ನಾವು ಜೊತೆಯಾಗಿ ಕೆಲಸ ಮಾಡುತ್ತಿದ್ದೆವು. ನಮ್ಮನ್ನು ಹುರಿದುಂಬಿಸುತ್ತಿದ್ದರು. 'ನನಗೆ ವಯಸ್ಸಾಯಿತು. ನಿನ್ನಂತಹವರು ಮುಂದೆ ಬರಬೇಕೆಂದು' ಹೇಳಿ ಬೆನ್ನು ತಟ್ಟುತ್ತಿದ್ದರು. ಅವರ ಅಗಲುವಿಕೆ ನೋವು ತಂದಿದೆ''.

-ರಶೀದ್ ವಿಟ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News