ಭ್ರಮಾಲೋಕದ ಹುಚ್ಚು ಜೀವನವನ್ನೇ ನುಚ್ಚುನೂರಾಗಿಸುತ್ತೆ ಜೋಕೆ!

Update: 2020-09-11 06:28 GMT

ಮಂಗಳೂರು, ಸೆ.10: ಭ್ರಮಾಲೋಕದ ಜೀವನವನ್ನು ಅರಸಿ ಹೊರಟವರಿಗೆ ಸರಳ ಮಾರ್ಗವೇ ಈ ಡ್ರಗ್ಸ್ ಎಂಬ ಅಮಲಿನ ಜಾಲ. ಮನಸ್ಸಿಗೆ ಒಂದಿಷ್ಟು ಸಂತೋಷ, ಒಂದಿಷ್ಟು ಕಿಕ್ ನೀಡುತ್ತದೆ ಎಂಬ ಭ್ರಮೆಯೊಂದಿಗೆ ಈ ಡ್ರಗ್ಸ್ ಜಾಲಕ್ಕೆ ಬೀಳುವ ಚಂಚಲ ಮನಸ್ಸಿನ ವಯಸ್ಸು, ಬಳಿಕ ಅದರಿಂದ ಹೊರ ಬರಲಾರದೆ, ಅದನ್ನು ಬಿಟ್ಟಿರಲಾರದ ನರಕಯಾತನೆ ಅನುಭವಿಸತೊಡಗುತ್ತದೆ. ಈ ಜಾಲಕ್ಕೆ ತಮಗೆ ಅರಿವಿಲ್ಲದೆ ಬೀಳುವವರ ಗುಂಪು ಒಂದೆಡೆಯಾದರೆ, ಮೋಜು ಮಸ್ತಿಯ ನೆಪದಲ್ಲಿ ಗೊತ್ತಿದ್ದೂ ಬೀಳುವವರು ಅನೇಕರು. ಕ್ಷಣಿಕ ಸುಖ, ಕಿಕ್ ಎಂಬ ನೆಪದಲ್ಲಿ ಡ್ರಗ್ಸ್ ಗೀಳು ಅಂಟಿಸಿಕೊಳ್ಳುವವರು ಇದರಿಂದ ಹೊರಬರಲಾರದೆ, ಶಿಕ್ಷಣದ ಜೊತೆಗೆ ತಮ್ಮ ಸುಂದರ ಭವಿಷ್ಯಕ್ಕೆ ಕೊಳ್ಳಿ ಇಟ್ಟುಕೊಳ್ಳುತ್ತಾರೆ. ಕೆಲವರಂತೂ ತಮಗೆ ಅರಿವಿಲ್ಲದಂತೆಯೇ ಕ್ರಿಮಿನಲ್‌ಗಳಾಗಿಯೂ ಮಾರ್ಪಡುತ್ತಾರೆ!

 ಕ್ಷಣಿಕ ಸುಖಕ್ಕಾಗಿ ಈ ಡ್ರಗ್ಸ್ ಮೋಹ ಜೀವನವನ್ನು ಅದೆಷ್ಟು ಕಂಗೆಡಿಸುತ್ತದೆ. ತನ್ನವರಿಂದ ಮಾತ್ರವಲ್ಲದೆ, ತನ್ನನ್ನು ತನ್ನಿಂದಲೇ ದೂರವಾಗಿಸುವ ಈ ಡ್ರಗ್ಸ್ ಗೀಳಿಗೆ ಸಿಲುಕಿದ ಯುವಕನೊಬ್ಬನ ಅನುಭವವನ್ನು ಆತನ ಮಾತುಗಳಲ್ಲೇ ಕೇಳೋಣ. (ಹೆಸರು ಬದಲಿಸಲಾಗಿದೆ.)

 ನನ್ನ ಹೆಸರು ಮುನಾಫ್. ದ.ಕ. ಜಿಲ್ಲೆಯ ಗ್ರಾಮಾಂತರ ಪ್ರದೇಶದ ನಿವಾಸಿ. ಹೈಸ್ಕೂಲ್ ಮೆಟ್ಟಿಲು ಹತ್ತುತ್ತಲೇ ನನ್ನ ಕನಸುಗಳಿಗೂ ರೆಕ್ಕೆ ಪುಕ್ಕಗಳು ಬಂದಿದ್ದವು. ನಾನೂ ಲೈಫ್ ಎಂಜಾಯ್ ಮಾಡಬೇಕೆಂಬ ಕನಸು ಕಾಣುತ್ತಿದ್ದೆ. ನಮ್ಮದು ಅತ್ತ ಗ್ರಾಮವೂ ಅಲ್ಲ ನಗರವೂ ಅಲ್ಲದ ಊರು. ಹಾಗಾಗಿ ಮಂಗಳೂರು ನಗರಕ್ಕೆ ಸಂಬಂಧಿಕರ ಮನೆಗೆ ಬರುವಾಗ ಇಲ್ಲಿನ ನಗರ ಜೀವನ ನನ್ನನ್ನು ಆಕರ್ಷಿಸುತ್ತಿತ್ತು. ನನ್ನ ಪೋಷಕರು ನಾನು ಚೆನ್ನಾಗಿ ಓದಬೇಕೆಂಬ ಮಹದಾಸೆಯಿಂದ ನನ್ನನ್ನು ಬೆಳ್ತಂಗಡಿಯಲ್ಲಿ ಉತ್ತಮ ಶಾಲೆಗೆ ಸೇರಿಸಿದ್ದರು. ಹೀಗೆ ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಸುಮಾರು ಏಳು ವರ್ಷಗಳ ಹಿಂದೆ ನಾನು 10ನೇ ತರಗತಿಯಲ್ಲಿದ್ದೆ. ನನ್ನ ಸೋದರ ಸಂಬಂಧಿ ಸಹೋದರರು ವಿದೇಶದಲ್ಲಿದ್ದು, ರಜೆಯ ಸಂದರ್ಭ ಊರಿಗೆ ಆಗಮಿಸುತ್ತಿದ್ದರು. ಮಂಗಳೂರು ಹಾಗೂ ಮುಂಬೈನಲ್ಲಿದ್ದ ಸಹೋದರರೂ ಜತೆಯಾಗುತ್ತಿದ್ದೆವು. ನಾವೆಲ್ಲಾ ಜತೆಯಾಗುವ ಹೊತ್ತು ಅದೊಂದು ಸಂತಸ ಕೂಟ. ಅವರಲ್ಲಿ ಹೆಚ್ಚಿನವರು ಅದಾಗಲೇ ಈ ಡ್ರಗ್ಸ್‌ನ ಚಟವನ್ನು ಹೊಂದಿದ್ದವರು. ಮುಖ್ಯವಾಗಿ ಅವರೆಲ್ಲಾ ಸಿಗರೇಟು ಸೇದುತ್ತಿದ್ದರು. ಅದು ನನ್ನನ್ನೂ ಆಕರ್ಷಿಸಲಾರಂಭಿಸಿತ್ತು. ನಾನೂ ಅವರ ಜತೆ ಸಿಗರೇಟು ಸೇದಲಾರಂಭಿಸಿದೆ. ಆ ವಯಸ್ಸಿನಲ್ಲಿ ಸಿಗರೇಟು ಸೇದುವುದು ಒಂದು ಫ್ಯಾಶನ್ ಎಂಬ ಭ್ರಮೆ ನನ್ನಲ್ಲಿ ಹುಟ್ಟಿತ್ತು. ನನ್ನ ಸೋದರ ಸಂಬಂಧಿಗಳ ಥಳುಕು ಬಳಕಿನ ಜೀವನ ಶೈಲಿ ನನಗೂ ಆಕರ್ಷಣೀಯವಾಗಿತ್ತು. ತುಂಬಾ ಜಾಲಿಯಾಗಿ, ಆರಾಮವಾಗಿ ತಮ್ಮ ಲೋಕದಲ್ಲಿ ಇರುತ್ತಿದ್ದ ಅವರನ್ನು ಕಂಡಾಗ ನಾನೂ ಅವರ ಹಾಗೆ ಇರಬೇಕು ಅನ್ನಿಸುತ್ತಿತ್ತು. ಅವರು ಸಿಗರೇಟ್‌ನಲ್ಲಿ ಸೇದುತ್ತಿದ್ದುದು ಗಾಂಜಾ. ಸಿಗರೇಟು ಸೇದುತ್ತಾ ಸೇದುತ್ತಾ ಗಾಂಜಾ ಚಟ ನನಗೂ ಹತ್ತಿತು. ನನಗೂ ಅದೊಂದು ರೀತಿಯ ಥ್ರಿಲ್, ಕಿಕ್ ಕೊಡಲಾರಂಭಿಸಿತು!

►ಪ್ರತಿಷ್ಠೆಗಾಗಿ ಗೀಳು ಹಚ್ಚಿಸಿಕೊಂಡೆ

  ಹೀಗೆ ಸೋದರ ಸಂಬಂಧಿಗಳ ಜತೆ ಆರಂಭವಾದ ಈ ಗಾಂಜಾ ಎಂಬ ಗೀಳನ್ನು ನಾನು ಶಾಲೆಗೂ ತೆಗೆದುಕೊಂಡು ಹೋಗಿ ನನ್ನ ಸ್ನೇಹಿತ ವಲಯದವರ ಜತೆ ಹಂಚಿಕೊಳ್ಳತೊಡಗಿದೆ. ಶಾಲೆಯಲ್ಲಿ ಇದು ಅತ್ಯಂತ ಗುಪ್ತವಾಗಿಯೇ ನಡೆಯುತ್ತಿತ್ತು. ನನ್ನ ಪಾಲಿಗೆ ಆ ಸಮಯದಲ್ಲಿ ಗಾಂಜಾ ಸೇವನೆ, ನನ್ನ ಸ್ನೇಹಿತರ ಎದುರಿನಲ್ಲಿ ಒಂದು ಪ್ರತಿಷ್ಠೆಯ ವಿಷಯವಾಗಿತ್ತು. ಹೀಗೆ ಅಂಟಿಕೊಂಡ ಗಾಂಜಾ ಹುಚ್ಚು ನಾನು ಕಾಲೇಜು ಮೆಟ್ಟಿಲೇರುವಾಗಲೂ ಮುಂದುವರಿಯಿತು. ಈ ಗಾಂಜಾ ಬೇಕೆಂದಾಗ ಅದನ್ನು ಹುಡುಕಿಕೊಂಡು ವಾರದ ಕೊನೆಯ ದಿನಗಳಲ್ಲಿ (ಶನಿವಾರ, ರವಿವಾರ) ಸ್ನೇಹಿತರ ಜತೆ ಬರಲಾರಂಭಿಸಿದೆ. ಮನೆಯಲ್ಲಿ ಸ್ಪೆಷಲ್ ತರಗತಿ ಎಂದು ಹೇಳಿ ಮಂಗಳೂರಿಗೆ ಬರುತ್ತಿದ್ದೆ. ಮಂಗಳೂರಿಗೆ ಬಂದು ಗಾಂಜಾಕ್ಕಾಗಿ ತಿರುಗಾಟ, ಹುಡುಕಾಟ! ನನ್ನ ಸೋದರ ಸಂಬಂಧಿಗಳು ಕೆಲವರು ಮಂಗಳೂರಿನಲ್ಲಿ ಇದ್ದ ಕಾರಣ ನನಗೆ ಈ ಗಾಂಜಾ ಅಥವಾ ಇತರ ಮಾದಕ ಪದಾರ್ಥಗಳ ಹುಡುಕಾಟ ಕಷ್ಟವಾಗಿರಲಿಲ್ಲ. ಸ್ನೇಹಿತರ ಮನೆಯಲ್ಲಿ ರಾತ್ರಿ ಹೊತ್ತು ಈ ಗಾಂಜಾ ಗುಂಗಿನಲ್ಲಿ ಕಳೆದಿದ್ದೂ ಇದೆ. ಹೀಗೆ ಟ್ರೆಂಡ್ ಆದ ನನ್ನ ಡ್ರಗ್ಸ್ ಹುಚ್ಚು, ಅಮಲು ಹೆಚ್ಚಿಸಬೇಕೆಂಬ ತವಕವನ್ನು ಹೆಚ್ಚಿಸುತ್ತಾ ಸಾಗಿತು. ಹೊಸ ಹೊಸ ಡ್ರಗ್ಸ್‌ನತ್ತ ಮನಸ್ಸು ಆಕರ್ಷಿಸಲಾರಂಭಿಸಿತು. ಕೊಕೇನ್, ಹೆರಾಯಿನ್ ಮೊದಲಾದ ಮಾರಕ ಡ್ರಗ್ಸ್ ಬಳಕೆಯನ್ನು ಮಾಡಲಾರಂಭಿಸಿದೆ. ಏನೂ ಸಿಗದಿದ್ದಾಗ ಗಮ್, ಬಾಂಡ್ ಸಿಕ್ಕರೂ ಸಾಕು ಎನ್ನಿಸುವಷ್ಟರ ಮಟ್ಟಿಗೆ ನಾನು ಅದರ ದಾಸನಾದೆ.

►ಟ್ಯಾಬ್ ಹೊಡೆಯುವುದು!

ಇದನ್ನು ಕೇಳಿದರೆ ವಿಚಿತ್ರ ಎನಿಸಬಹುದು. ಆದರೆ ಇದೂ ಒಂದು ರೀತಿಯ ಡ್ರಗ್ಸ್ ಸೇವನೆಯ ವಿಭಿನ್ನ ಹೆಸರು. ನಾರ್ಮಲ್ ಸೋಡಾಗೆ ಟ್ಯಾಬ್ಲೆಟ್ (ಆ್ಯಶ್)ಗಾಂಜಾದ ಎಣ್ಣೆ ರೂಪದ ಪದಾರ್ಥವನ್ನು ಹಾಕಿ ಎಳೆದಾಗ ಒಂದೇ ಸಲಕ್ಕೆ ಅಮಲೇರುತ್ತದೆ. ಇದನ್ನೂ ನಾನು ಅಭ್ಯಾಸ ಮಾಡಿಕೊಂಡಿದ್ದೆ. ಈ ಡ್ರಗ್ಸ್ ಹುಚ್ಚು ನನ್ನನ್ನು ಕುಡಿತದ ಕಡೆಗೂ ವಾಲಿಸಿತ್ತು. ಹೀಗೆ ಕಾಲೇಜಿನವರಿಗಾಗಲಿ, ಮನೆಯವರಿಗಾಗಲಿ ತಿಳಿಯದೆ ನನ್ನ ಈ ಡ್ರಗ್ಸ್ ಪಯಣ ಸಾಗಿತ್ತು. ಹೀಗೆ ಡ್ರಗ್ಸ್‌ನ ವಿಷ ಜಾಲ ಸುಮಾರು ಮೂರು ವರ್ಷಗಳಿಗೂ ಅಧಿಕ ಕಾಲ ನನ್ನನ್ನು ತನ್ನ ಕಪಿಮುಷ್ಟಿಯಲ್ಲಿ ಇರಿಸಿತ್ತು. ಇದರಿಂದ ನನಗೇನೂ ಲಾಭವಿಲ್ಲ ಎಂಬ ಅರಿವಿದ್ದರೂ ಅದರ ನಶೆ ನನ್ನನ್ನು ಮತ್ತಷ್ಟು ಅಮಲೇರಿಸುವ ಡ್ರಗ್ಸ್‌ನ ಆಕರ್ಷಿಸಿತ್ತು. ಸುಮಾರು 18ಕ್ಕೂ ಅಧಿಕ ವಿಧದ ಡ್ರಗ್ಸ್ ನ್ನು ನಾನು ಸೇವನೆ ಮಾಡಿದ್ದೆ ಎಂದು ಇಂದು ನಾನು ಹೇಳುವಾಗ ನಿಜಕ್ಕೂ ನನಗೆ ಭಯ ವಾಗುತ್ತಿದೆ!

ಇಷ್ಟರಲ್ಲಿ ನನಗೆ ಪ್ರದೀಪ್ ಎಂಬ ಒಬ್ಬನ ಗೆಳೆತನವಾಯಿತು. ಆತನ ಮೂಲಕ ಮಂಗಳೂರಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಯೊಂದರ ಜತೆ ನಂಟು ಬೆಳೆಯಿತು. ಈ ನಂಟು ತಲೆಗೆ ಹತ್ತಿದ್ದ ನಶೆಯ ಗುಂಗಿನಿಂದ ನನ್ನನ್ನು ಸಾಂಸ್ಕೃತಿಕ ಗುಂಗಿನೊಳಗೆ ಸೇರಿಸಿತು. ದಿನಗಳು ಕಳೆಯುತ್ತಿದ್ದಂತೆಯೇ ಅಲ್ಲಿ ನಾನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಾರಂಭಿಸಿದೆ. ನನ್ನ ಗೆಳೆಯ ನನಗೆ ಜೀವನದ ನಿಜ ಅರ್ಥದ ಬಗ್ಗೆ ತಿಳಿ ಹೇಳಿದ. ದಿನಕಳೆದಂತೆ, ಜೀವನವೆಂದರೆ ಮೋಜು ಮಸ್ತಿ, ಅಮಲು ಅಲ್ಲ ಎಂಬ ಅರಿವು ಮಾಡಲಾರಂಭಿಸಿತು. ನಾನು ಹೆಚ್ಚು ಹೆಚ್ಚು ಈ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಂತೆ ನನ್ನ ತಲೆಗೆ ಹತ್ತಿದ್ದ ನಶೆಯ ಹುಚ್ಚು ಹಂತ ಹಂತವಾಗಿ ಇಳಿಯ ತೊಡಗಿತು. ಜತೆಗೆ ನಾನು ಉತ್ತಮ ಪುಸ್ತಕಗಳ ಓದಿನಲ್ಲೂ ತೊಡಗಿಸಿಕೊಂಡೆ. ಕ್ಷಣಿಕ ಸುಖ ನೀಡುವ ಅಮಲಿನ ಜೀವನಕ್ಕಿಂತ ಜೀವನ ಪೂರ್ತಿ ಹೊಸತನಕ್ಕೆ ತೆರೆದುಕೊಳ್ಳುವ, ಹೊಸ ಹೊಸ ವಿಷಯಗಳನ್ನು ಪರಿಚಯಿಸುವ ಈ ಸಾಂಸ್ಕೃತಿಕ ಚಟುವಟಿಕೆಗಳು, ಪುಸ್ತಕಗಳಲ್ಲಿ ಜೀವನದ ನಿಜ ಅರ್ಥವನ್ನು ಕಾಣಲಾರಂಭಿಸಿದೆ. ನಿಜ ಹೇಳಬೇಕೆಂದರೆ, ಒಂದು ವೇಳೆ ನನಗೆ ಈ ಸಾಮಾಜಿಕ ಸಂಘಟನೆಯ ನಂಟು ಬೆಳೆಯದಿರುತ್ತಿದ್ದರೆ ನಾನು ಇಂದು ಏನಾಗಿರುತ್ತಿದ್ದೆನೇನೋ ಊಹಿಸಲೂ ಅಸಾಧ್ಯ. ಕಳೆದ ನಾಲ್ಕು ವರ್ಷಗಳಿಂದ ನಶೆಯ ಗುಂಗಿನಿಂದ ಹೊರಬಂದು ಹೊಸ ಮನುಷ್ಯನಾಗಿ, ಇತರರಿಗೆ ಜಾಗೃತಿ ಮೂಡಿಸುವ ವ್ಯಕ್ತಿಯಾಗಿ ಬೆಳೆದಿರುವ ಬಗ್ಗೆ ನನಗೆ ತೃಪ್ತಿ ಇದೆ. ಈ ಚಟದ ದುಷ್ಪರಿಣಾಮ, ಅದರಿಂದ ಆಗುವ ಸಾಮಾಜಿಕ ತೊಂದರೆಗಳ ಬಗ್ಗೆ ಇಂದು ನಾನು ಇತರರಿಗೆ ಸಮಾಲೋಚನೆಯನ್ನೂ ಮಾಡುತ್ತಿದ್ದೇನೆ. ವಿಶೇಷವೆಂದರೆ ನನ್ನ ಈ ಚಟದ ಬಗ್ಗೆ ಇಂದಿಗೂ ನನ್ನ ಮನೆಯವರಿಗೆ ತಿಳಿದಿಲ್ಲ. ಅಷ್ಟು ಗುಪ್ತವಾಗಿ ಇದರ ಬಳಕೆಯನ್ನು ನಾನು ಮಾಡುತ್ತಿದ್ದೆ. ಮನೆಯಲ್ಲಿ ನಾನು ಯಾವುದೇ ರೀತಿಯ ನಶೆಯ ಪದಾರ್ಥಗಳನ್ನು ಉಪಯೋಗಿಸುತ್ತಿರಲಿಲ್ಲ. ಹೊರಗಡೆ ಉಪಯೋಗಿಸುತ್ತಿದ್ದುದು ಮನೆಯವರಿಗೆ ಯಾವುದೇ ಸುಳಿವು ಸಿಗದಂತೆ ಎಚ್ಚರಿಕೆ ವಹಿಸುತ್ತಿದ್ದೆ. ಕಾಲೇಜಿನಲ್ಲಿರುವಾಗ ಈ ಮಾದಕ ವ್ಯಸನಕ್ಕೆ ಸಂಬಂಧಿಸಿ ಒಂದು ಬಾರಿ ದಾಳಿಯಾದಾಗ ನನ್ನ ಕೆಲ ಸ್ನೇಹಿತರು ಸಿಕ್ಕಿ ಬಿದ್ದಿದ್ದರೂ ನಾನು ಪಾರಾಗಿದ್ದೆ. ಅಷ್ಟು ಎಚ್ಚರಿಕೆಯಿಂದ ಇರುತ್ತಿದ್ದೆ! ಹಾಗಾಗಿಯೇ ಹೇಳುತ್ತಿರುವುದು ಈ ಡ್ರಗ್ಸ್ ಸೇವಿಸುವವರನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯ ಎಂದು.

►ಡ್ರಗ್ಸ್‌ನ ವಿಧಗಳ ಜತೆ ಅಪಾಯವೂ ಹೆಚ್ಚಿದೆ

 ನಾನು ಬಳಕೆ ಮಾಡುತ್ತಿದ್ದ ಸಂದರ್ಭ ನಮಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದು ಮಂಗಳೂರಿನ ಕೆಲ ವಿದ್ಯಾರ್ಥಿಗಳು. ಈಗ ಇದು ದಂಧೆಯಾಗಿ ಬೆಳೆದಿದೆ. ಇದರ ಹಿಂದೆ ಬಹುದೊಡ್ಡ ಜಾಲವೇ ಕಾರ್ಯಾಚರಿಸುತ್ತಿದೆ. ನಾವು ಹಿಂದೆ ಹೊಸ ರೀತಿಯ ಡ್ರಗ್ಸ್ ನೋಡಬೇಕಾದರೆ ಗೋವಾಕ್ಕೆ ಹೋಗಬೇಕಿತ್ತು. ಆದರೆ ಈಗ ಹಾಗಿಲ್ಲ. ಮಂಗಳೂರಿನಲ್ಲಿಯೇ ಈ ದಂಧೆ ಅತ್ಯಂತ ವ್ಯವಸ್ಥಿತವಾಗಿ ತನ್ನ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಆನ್‌ಲೈನ್ ಮೂಲಕವೂ ಡ್ರಗ್ಸ್ ವ್ಯವಹಾರ ನಡೆಯುತ್ತಿದೆ. ಇದು ಯುವ ಸಮುದಾಯದ ಭವಿಷ್ಯಕ್ಕೆ ಅಪಾಯಕ್ಕೆ ಒಡ್ಡುತ್ತಿದೆೆ. ಡ್ರಗ್ಸ್ ಬಳಕೆ ಮಾಡುವ ಯುವಕರು ತಮ್ಮ ಮನೆಯವರಿಗೆ ಗೊತ್ತಾಗದಂತೆ ಹಲವಾರು ರೀತಿಯ ಟ್ರಿಕ್ಸ್ ಬಳಕೆ ಮಾಡುತ್ತಾರೆ. ಮುಖ್ಯವಾಗಿ ಡ್ರಗ್ಸ್ ಸೇವನೆ ವಾಸನೆಯಿಂದ ಕಂಡು ಹಿಡಿಯಲು ಆಗದು. ಆದರೆ ಸೇವನೆ ಮಾಡುವವರ ಕಣ್ಣುಗಳು ಕೆಂಪಾಗುತ್ತವೆ. ಆದರೆ ಅದು ಗೊತ್ತಾಗದಂತೆ ಐ ಡ್ರಾಪ್ಸ್‌ಗಳನ್ನು ಬಳಕೆ ಮಾಡುವಂತಹ ಪ್ರಸಂಗಗಳು ಈಗ ನಡೆಯುತ್ತಿವೆ. ಸುಖ, ನೋವು, ಒಂಟಿತನ, ನರಳುವಿಕೆೆ, ದು:ಖ ದುಮ್ಮಾನಗಳಿಗೆ ಈ ಮಾದಕ ದ್ರವ್ಯಗಳ ಸೇವನೆ ಪರಿಹಾರವೆಂಬ ನಂಬಿಕೆಯಿಂದ ಇದರ ದಾಸನಾಗುತ್ತಾ ಸಾಗುವ ಡ್ರಗ್ಸ್ ವ್ಯಸನದಿಂದಾಗಿ ಇದರಿಂದ ಅದೆಷ್ಟೋ ಕುಟುಂಬಗಳು ಒಡೆದು ಹೋಗಿವೆ. ಅದೆಷ್ಟೋ ಜೀವಗಳು ಬಲಿಯಾಗಿವೆ. ಸಾಮಾಜಿಕವಾಗಿ, ಆರ್ಥಿಕವಾಗಿ ನಷ್ಟಕ್ಕೆ ತುತ್ತಾಗಿದೆೆ. ಒಮ್ಮೆ ಈ ಜಾಲಕ್ಕೆ ಸಿಲುಕಿದರೆ ಮತ್ತೆ ಪಾರಾಗಿ ಬರುವುದು ಒಂದು ಸಾಹಸವೇ ಸರಿ. ಚಂಚಲ ಮನಸ್ಸಿನ ಓಟಕ್ಕೆ ಓ ಗೊಟ್ಟು ನಿಮ್ಮ ಭವಿಷ್ಯವನ್ನು ಬರಿದಾಗಿಸಬೇಡಿ ಎಂಬುದು ನನ್ನಂತಹ ಯುವ ಮನಸ್ಸುಗಳಿಗೆ ನನ್ನ ಕಳಕಳಿಯ ಮನವಿ.

ನಾನೂ ಲೈಫ್ ಎಂಜಾಯ್ ಮಾಡಬೇಕೆಂಬ ತವಕದಲ್ಲಿಯೇ ಈ ಡ್ರಗ್ಸ್ ಗೀಳಿಗೆ ಬಿದ್ದೆ!

ಅದೃಷ್ಟವಶಾತ್ ನಾನು ಈ ಗೀಳಿನಿಂದ ಮೂರು ವರ್ಷಗಳ ಅವಧಿಯಲ್ಲೇ ಹೊರಬಂದೆ. ಇದರ ಒಳ ಹೊರಗು, ಇದರ ಕಷ್ಟ ನಷ್ಟ ಹಾಗೂ ಅಪಾಯಗಳ ಬಗ್ಗೆ ಸಾಕಷ್ಟು ಅರಿತುಕೊಂಡಿರುವುದರಿಂದಲೇ ಇಂದು ನಾನು ಈ ಬಗ್ಗೆ ನನ್ನಂತಹ ಯುವ ಮನಸ್ಸುಗಳಿಗೆ ಇದರ ಅಪಾಯದ ಬಗ್ಗೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡುತ್ತಿದ್ದೇನೆ.

ನಾನು ನನ್ನ ಮನೆಯವರಿಗೆ ತಿಳಿಯದಂತೆ ಈ ಚಟವನ್ನು ನನ್ನದಾಗಿಸಿಕೊಂಡಿದ್ದೆ. ಆದರೆ ಅದರಿಂದ ಯಾವುದೇ ಲಾಭ ನನಗೆ ಆಗಿಲ್ಲ. ಬದಲಾಗಿ ಆ ಮೂರು ವರ್ಷಗಳ ಕಾಲ ನಾನು ನನ್ನಿಂದಲೇ ದೂರವಾಗಿದ್ದೆ. ನಾನೇನೋ ಕೊನೆಗೂ ಎಚ್ಚೆತ್ತುಕೊಂಡು ಹೊಸ ದಾರಿಯತ್ತ ಸಾಗಿದೆ. ಆದರೆ ಡ್ರಗ್ಸ್ ಚಟಕ್ಕೆ ಬಲಿಯಾದ ಬಹಳಷ್ಟು ಮಂದಿ ಇದರಿಂದ ಹೊರಬರಲಾರದೆ, ಕುಟುಂಬಕ್ಕೆ ಭಾರವಾಗಿ ತಮ್ಮ ಬದುಕು ಕಳೆಯುವುದನ್ನು, ರೋಗಕ್ಕೆ ತುತ್ತಾಗುವುದನ್ನು ನೋಡಿದ್ದೇನೆ. ಹಾಗಾಗಿ ಪೋಷಕರೇ ನಿಮ್ಮ ಒತ್ತಡದ ಜೀವನದ ನಡುವೆಯೂ ನಿಮ್ಮ ಮಕ್ಕಳ ಜತೆ ಒಂದಿಷ್ಟು ಸಮಯ ಕಳೆಯಿರಿ. ಅವರ ಜತೆ ಸ್ನೇಹಿತರಂತಿದ್ದು, ಅವರ ಬೇಕು ಬೇಡಗಳ ಬಗ್ಗೆ ಗಮನ ಹರಿಸಿ. ಪ್ರೀತಿ ತೋರಿಸಿ, ನಿಮ್ಮ ಪ್ರೀತಿ ವಿಶ್ವಾಸದಿಂದ ಆ ಡ್ರಗ್ಸ್‌ನ ಕಪಟ ನಶೆಯಿಂದ ದೂರವಿರುವಂತೆ ಮಾಡಿ.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News