ತೆರಿಗೆ ವಂಚನೆ ಆರೋಪ: ಎ.ಆರ್.ರಹಮಾನ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್
ಚೆನ್ನೈ, ಸೆ.11: ಆದಾಯ ತೆರಿಗೆ ಇಲಾಖೆ ದಾಖಲಿಸಿದ ಆರೋಪಕ್ಕೆ ಸಂಬಂಧಿಸಿ ವಿವರಣೆ ನೀಡುವಂತೆ ಮದ್ರಾಸ್ ಹೈಕೋರ್ಟ್, ಆಸ್ಕರ್ ಪ್ರಶಸ್ತಿ ವಿಜೇತ, ಸಂಗೀತ ನಿರ್ದೇಶಕ ಎ.ಆರ್.ರಹಮಾನ್‌ಗೆ ನೋಟಿಸ್ ನೀಡಿದೆ.
ತೆರಿಗೆ ತಪ್ಪಿಸುವ ಸಲುವಾಗಿ ಎ.ಆರ್.ರಹಮಾನ್‌ರವರು ತನ್ನ ಚಾರಿಟೇಬಲ್ ಟ್ರಸ್ಟ್ ಎ.ಆರ್.ರಹಮಾನ್ ಫೌಂಡೇಶನ್ ಮೂಲಕ 3 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎ.ಆರ್.ರಹಮಾನ್ ಇಂಗ್ಲೆಂಡ್ ಮೂಲದ ಟೆಲಿಕಾಂ ಕಂಪೆನಿಗೆ ವಿಶೇಷ ಸಂಗೀತ ಸಂಯೋಜನೆಗಾಗಿ ಮಾಡಿಕೊಂಡಿದ್ದ ಒಪ್ಪಂದದಂತೆ 2011-12ರಲ್ಲಿ 3.47ಕೋಟಿ ರೂ. ಆದಾಯವನ್ನು ಸ್ವೀಕರಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ವಕೀಲರು ತಿಳಿಸಿದ್ದಾರೆ.
ಒಪ್ಪಂದದ ಪ್ರಕಾರ ಎ.ಆರ್.ರಹಮಾನ್‌ರವರು ಟೆಲಿಕಾಂ ಕಂಪೆನಿಗೆ ತನ್ನ ಸಂಭಾವನೆಯನ್ನು ನೇರವಾಗಿ ಚಾರಿಟೇಬಲ್ ಫೌಂಡೇಶನ್‌ಗೆ ಪಾವತಿಸುವಂತೆ ಸೂಚಿಸಿದ್ದಾರೆ. ತೆರಿಗೆಗೆ ಒಳಪಡುವ ಆದಾಯವನ್ನು ರೆಹಮಾನ್ ಸ್ವೀಕರಿಸಬೇಕು. ತೆರಿಗೆ ಕಡಿತವಾದ ಬಳಿಕ ಅದನ್ನು ಟ್ರಸ್ಟ್‌ಗೆ ವರ್ಗಾಯಿಸಬೇಕು. ಆದರೆ ಚಾರಿಟೇಬಲ್ ಟ್ರಸ್ಟ್‌ಗೆ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿ ನೀಡಲಾಗಿರುವುದರಿಂದ ಅದನ್ನು ಟ್ರಸ್ಟ್ ಮೂಲಕ ರವಾನಿಸಲಾಗುವುದಿಲ್ಲ ಎಂದು ಐಟಿ ವಕೀಲರು ತಿಳಿಸಿದ್ದಾರೆ.