ಸುಶಾಂತ್ 'ಕೊಲೆಯಾಗಿದ್ದಾರೆಂದು' ನಾನು ಯಾವತ್ತೂ ಹೇಳಿಲ್ಲ: ಮಾಜಿ ಗೆಳತಿ ಅಂಕಿತಾ ಲೋಖಂಡೆ
ಮುಂಬೈ : ನಟ ಸುಶಾಂತ್ ಸಿಂಗ್ ರಾಜಪುತ್ ಅವರು `ಕೊಲೆಯಾಗಿದ್ದಾರೆಂದು' ತಾವು ಯಾವತ್ತೂ ಹೇಳಿಲ್ಲ. ಆದರೆ ತನ್ನ `ದಿವಂಗತ ಸ್ನೇಹಿತ' ಹಾಗೂ ಆತನ ಕುಟುಂಬಕ್ಕೆ ನ್ಯಾಯ ದೊರೆಯುವುದು ತನಗೆ ಬೇಕಿದೆ ಎಂದು ನಟಿ ಹಾಗೂ ಸುಶಾಂತ್ ಮಾಜಿ ಗೆಳತಿ ಅಂಕಿತಾ ಲೋಖಂಡೆ ಹೇಳಿದ್ದಾರೆ.
''ಇದೊಂದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂದು ಮಾಧ್ಯಮ ನನ್ನ ಮುಂದೆ ಆಗಾಗ ಪ್ರಶ್ನೆ ಹಾಕುತ್ತಿರುವುದರಿಂದ ನಾನು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇನೆ. ನಾನು ಇದನ್ನು ಕೊಲೆ ಎಂದು ಯಾವತ್ತೂ ಹೇಳಿಲ್ಲ ಹಾಗೂ ಅದಕ್ಕೆ ಯಾವುದೇ ನಿರ್ದಿಷ್ಟ ವ್ಯಕ್ತಿ ಕಾರಣ ಎಂದೂ ಹೇಳಿಲ್ಲ,'' ಎಂದು ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಅಂಕಿತಾ ತಿಳಿಸಿದ್ದಾರೆ.
''ನನ್ನ ದಿವಂಗತ ಸ್ನೇಹಿತನಿಗೆ ನ್ಯಾಯ ದೊರೆಯಬೇಕೆಂದು ನಾನು ಯಾವತ್ತೂ ಬಯಸಿದ್ದೆ ಹಾಗೂ ಆತನ ಕುಟುಂಬದ ಜತೆಗೆ ನಿಂತಿದ್ದೇನೆ, ಸತ್ಯವನ್ನು ತನಿಖಾ ಏಜನ್ಸಿಗಳು ಬಯಲಿಗೆಳೆಯಬೇಕು,'' ಎಂದು ಆಕೆ ಬರೆದಿದ್ದಾರೆ.
''ನಾನು ಸುಶಾಂತ್ ಹಾಗೂ 2016ರ ತನಕದ ಆತನ ಮಾನಸಿಕ ಆರೋಗ್ಯದ ಬಗ್ಗೆ ಮಾತ್ರ ಮಾತನಾಡಿದ್ದೇನೆ,'' ಎಂದು ಹೇಳಿದ ಅಂಕಿತಾ, ಇದೀಗ ಬಂಧನದಲ್ಲಿರುವ ರಿಯಾ ಚಕ್ರವರ್ತಿಯನ್ನು ಉಲ್ಲೇಖಿಸುತ್ತಾ ``ಆತನಿಗೆ ಖಿನ್ನತೆ ಸಮಸ್ಯೆಯಿದೆಯೆಂದು ಸಾರ್ವಜನಿಕವಾಗಿ ಹೇಳಿರುವ ಆಕೆಗೆ ಆತನ ಮಾನಸಿಕ ಸ್ಥಿತಿ ಚೆನ್ನಾಗಿ ತಿಳಿದಿತ್ತು. ಹೀಗೆ ಖಿನ್ನತೆಯಿಂದ ಬಳಲುವ ವ್ಯಕ್ತಿ ಡ್ರಗ್ಸ್ ಸೇವಿಸಲು ಆಕೆ ಅನುಮತಿಸುತ್ತಿದ್ದಳೇ?,'' ಎಂದು ಅಂಕಿತಾ ಪ್ರಶ್ನಿಸಿದ್ದಾರೆ.
''ನಾನೊಬ್ಬಳು ನೈಜ ಮಹಾರಾಷ್ಟ್ರೀಯಳು ಹಾಗೂ ಭಾರತೀಯ ನಾಗರಿಕಳು.'' ಎಂದು ಹೇಳಿರುವ ಅಂಕಿತಾ ತನಗೆ ರಾಜ್ಯ ಮತ್ತು ಕೇಂದ್ರ ತನಿಖಾ ಏಜನ್ಸಿಗಳ ಮೇಲೆ ಪೂರ್ಣ ಭರವಸೆಯಿದೆ ಎಂದಿದ್ದಾರೆ.