ಕಸ್ತೂರಿರಂಗನ್ ವರದಿ ವ್ಯಾಪ್ತಿ 100ಮೀ.ಗೆ ಸೀಮಿತಕ್ಕೆ ಮನವಿ

Update: 2020-09-11 12:54 GMT

ಹೆಬ್ರಿ, ಸೆ.11: ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ನೇತೃತ್ವದಲ್ಲಿ ಹೆಬ್ರಿಯ ನಿಯೋಗವೊಂದು ಗುರುವಾರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಭೇಟಿ ಮಾಡಿ ಕಸ್ತೂರಿರಂಗನ್ ವರದಿಯ ಅತೀ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು 100ಮೀ.ಗೆ ಸೀಮಿತಗೊಳಿಸುವಂತೆ ಮನವಿ ಸಲ್ಲಿಸಿತು.

ಕಸ್ತೂರಿರಂಗನ್ ವರದಿಯು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅತೀ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಒಂದು ಕಿ.ಮಿ. ಎಂದು ನಿಗದಿ ಪಡಿಸಿ ಈ ಪರಿಸರ ಅತೀ ಸೂಕ್ಷ್ಮ ಪ್ರದೇಶ ಎಂದು ಕಳೆದ ಜುಲೈ ತಿಂಗಳಿನಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದೆ.

ಇದರಿಂದ ಅರಣ್ಯವಾಸಿಗಳು, ಅರಣ್ಯದಂಚಿನ ವಾಸಿಗಳು, ರೈತರು ಮತ್ತು ಮಲೆಕುಡಿಯ ಸಹಿತ ಬುಡಕಟ್ಟು ಸಮುದಾಯದ ಸಹಿತ ಜನಸಾಮಾನ್ಯರಿಗೆ ಅತೀ ಸಮಸ್ಯೆಯಾಗುತ್ತಿದೆ. ಆದುದರಿಂದ ಪರಿಸರ ಸೂಕ್ಷ್ಮ ಪ್ರದೇಶದ ಮಿತಿಯನ್ನು ಕೇವಲ 100 ಮೀ. ಸೀಮಿತಗೊಳಿಸುವಂತೆ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಹಿಂದೆ ಅತೀ ಸೂಕ್ಷ್ಮ ವಲಯ 10 ಕಿ.ಮಿ. ಎಂದು ನಿಗದಿಯಾಗಿತ್ತು, ಈಚೆಗೆ ಅದನ್ನು ಒಂದು ಕಿ.ಮಿ.ಗೆ ಇಳಿಸಲಾಗಿತ್ತು. ಒಂದು ಕಿ.ಮಿ. ವ್ಯಾಪ್ತಿ ಇದ್ದರೂ ಸಮಸ್ಯೆಯಾಗುತ್ತದೆ. ಇದರಿಂದ ಉಡುಪಿ ಜಿಲ್ಲೆಯ ಹೆಬ್ರಿ ಕಾರ್ಕಳ, ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಅಕ್ರಮ ಸಕ್ರಮ ಮಂಜೂರಾತಿ, ಮನೆ, ಜಾಗ ಮಾರಾಟ ಸಹಿತ ಹಲವು ತೊಂದರೆ ಎದುರಾಗಲಿದೆ. ವಿದ್ಯುತ್ ಸಂಪರ್ಕ, ಮನೆ ನಂಬ್ರ ಸಹಿತ ಸರಕಾರದ ಬಹುತೇಕ ಸವಲತ್ತುಗಳು ಜನರಿಗೆ ಇದರಿಂದ ದೊರೆಯುವುದಿಲ್ಲ. ಸಾವಿರಾರು ಕುಟುಂಬಗಳು ಸಮಸ್ಯೆಯನ್ನು ಎದುರಿಸಲಿವೆ ಎಂದು ಮಂಜುನಾಥ ಪೂಜಾರಿ ಮನವಿಯಲ್ಲಿ ದೂರಿದ್ದಾರೆ.

ಹೆಬ್ರಿಯಲ್ಲಿ ಒಂದು ಕಿ.ಮೀ. ವ್ಯಾಪ್ತಿ ಎಂದರೆ ಹೆಬ್ರಿಯ ಬಸ್ ನಿಲ್ದಾಣದ ವರೆಗೆ ಬರುತ್ತಿದೆ. ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದ್ದಾರೆ.

ಹೆಬ್ರಿಯಲ್ಲಿ ಒಂದು ಕಿ.ಮೀ. ವ್ಯಾಪ್ತಿ ಎಂದರೆ ಹೆಬ್ರಿಯ ಬಸ್ ನಿಲ್ದಾಣದ ವರೆಗೆ ಬರುತ್ತಿದೆ. ಸರಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಂಜುನಾಥ ಪೂಜಾರಿ ಒತ್ತಾಯಿಸಿದ್ದಾರೆ. ನಿಯೋಗದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಯುವ ಮುಖಂಡ ಎಚ್.ಪ್ರದೀಪ್ ಭಂಡಾರಿ, ಪ್ರಮುಖರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಶಶಿಕಲಾ ಡಿ ಪೂಜಾರಿ ಮುದ್ರಾಡಿ, ಅಶ್ವಿನಿ ಗೌಡ ಮುದ್ರಾಡಿ, ಹೆಬ್ರಿ ಶಂಕರ ಸೇರಿಗಾರ್, ದಿನೇಶ್ ಶೆಟ್ಟಿ ಹುತ್ತುಕೆ ಹೆಬ್ರಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News