ಕೋವಿಡ್ ಪ್ರವೇಶಿಸುವುದನ್ನು ತಡೆಗಟ್ಟಲು ಉ. ಕೊರಿಯಾದಿಂದ ಗಡಿಯಲ್ಲಿ ಕಂಡಲ್ಲಿ ಗುಂಡಿಕ್ಕುವ ಆದೇಶ: ಅಮೆರಿಕಾ ಸೇನಾಧಿಕಾರಿ

Update: 2020-09-11 17:49 GMT

ವಾಷಿಂಗ್ಟನ್, ಸೆ.11: ಚೀನಾದಿಂದ ಕೊರೋನ ವೈರಸ್ ತಮ್ಮ ದೇಶದೊಳಗೆ ಪ್ರವೇಶಿಸುವುದನ್ನು ತಡೆಯಲು ಉತ್ತರಕೊರಿಯಾದ ಅಧಿಕಾರಿಗಳು ಕೊರೋನ ಶಂಕಿತರನ್ನು ಶೂಟ್ ಮಾಡಿ ಕೊಲ್ಲುವ ಆದೇಶ ಹೊರಡಿಸಿದ್ದಾರೆ ಎಂದು ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕ ಪಡೆಗಳ ಕಮಾಂಡರ್ ರಾಬರ್ಟ್ ಅಬ್ರಾಮ್ಸ್ ಹೇಳಿದ್ದಾರೆ.

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಉತ್ತರಕೊರಿಯಾದಲ್ಲಿ ಆರೋಗ್ಯಕ್ಷೇತ್ರದ ನಿರ್ವಹಣೆಯೂ ಹದಗೆಟ್ಟಿದ್ದು ಕೊರೋನ ಸೋಂಕು ಹರಡದಂತೆ ತಡೆಯುವುದು ಸವಾಲಿನ ಕೆಲಸವಾಗಿದೆ. ಆದರೂ, ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೋನ ವೈರಸ್‌ನಿಂದ ವಿಶ್ವದ ಎಲ್ಲಾ ರಾಷ್ಟ್ರಗಳೂ ತತ್ತರಿಸಿದ್ದರೂ ಉತ್ತರ ಕೊರಿಯಾದಲ್ಲಿ ಇದುವರೆಗೆ ಒಂದೂ ಪ್ರಕರಣವನ್ನು ಅಲ್ಲಿನ ಅಧಿಕಾರಿಗಳು ದೃಢಪಡಿಸಿಲ್ಲ. ತನ್ನ ಮಿತ್ರರಾಷ್ಟ್ರ ಚೀನಾದೊಂದಿಗಿನ ಗಡಿಯನ್ನು ಉತ್ತರಕೊರಿಯಾ ಜನವರಿಯಲ್ಲೇ ಮುಚ್ಚಿದ್ದರೆ ಜುಲೈಯಲ್ಲಿ ತುರ್ತುಪರಿಸ್ಥಿತಿಯನ್ನು ಗರಿಷ್ಟ ಮಟ್ಟಕ್ಕೆ ಹೆಚ್ಚಿಸಿರುವುದಾಗಿ ಸರಕಾರಿ ಮಾಧ್ಯಮ ವರದಿ ಮಾಡಿದೆ. ಆದರೆ ಗಡಿಯನ್ನು ಮುಚ್ಚಿದ ಹಿನ್ನೆಲೆಯಲ್ಲಿ ಕಳ್ಳಸಾಗಾಣಿಕೆ ವಸ್ತುಗಳ ಬೇಡಿಕೆ ಹೆಚ್ಚಿದ್ದರಿಂದ ಅಧಿಕಾರಿಗಳು ಅನಿವಾರ್ಯವಾಗಿ ಮಧ್ಯಪ್ರವೇಶ ಮಾಡಬೇಕಾಗಿದೆ . ಇದನ್ನು ನಿಯಂತ್ರಿಸಲು ಚೀನಾದ ಗಡಿಭಾಗದ ಒಂದು ಅಥವಾ ಎರಡು ಕಿ.ಮೀ ಮೇಲ್ಗಡೆ ಬಫರ್ ವಲಯ (ಬಫರ್ ಝೋನ್)ವನ್ನು ಗುರುತಿಸಲಾಗಿದೆ ಎಂದು ಕಮಾಂಡರ್ ರಾಬರ್ಟ್ ಅಬ್ರಾಮ್ಸ್ ಹೇಳಿದ್ದಾರೆ.

ಗುರುವಾರ ವಾಷಿಂಗ್ಟನ್‌ನಲ್ಲಿ ಸೆಂಟರ್ ಫಾರ್ ಸ್ಟ್ರಟೆಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್ (ಸಿಎಸ್‌ಐಎಸ್) ಆಯೋಜಿಸಿದ್ದ ಆನ್‌ಲೈನ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಅಲ್ಲಿ ಉತ್ತರ ಕೊರಿಯಾ ವಿಶೇಷ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದ್ದು ಗುಂಡಿಕ್ಕಿ ಕೊಲ್ಲುವ (ಶೂಟ್ ಟು ಕಿಲ್) ಆದೇಶ ಜಾರಿಯಲ್ಲಿದೆ. ಗಡಿಯನ್ನು ಮುಚ್ಚಿರುವುದು ಪರಮಾಣು ಪರೀಕ್ಷೆಗಳ ಹಿನ್ನೆಲೆಯಲ್ಲಿ ಉತ್ತರಕೊರಿಯಾದ ಮೇಲೆ ವಿಧಿಸಲಾಗಿರುವ ಆರ್ಥಿಕ ನಿರ್ಬಂಧದ ಪರಿಣಾಮವನ್ನು ತೀವ್ರಗೊಳಿಸಿದೆ. (ಉತ್ತರಕೊರಿಯಾದ ಒಟ್ಟು ಆಮದಿನಲ್ಲಿ 85% ಚೀನಾದಿಂದ ಸರಬರಾಜು ಆಗುತ್ತದೆ). ಜೊತೆಗೆ, ಇತ್ತೀಚೆಗೆ ಉತ್ತರಕೊರಿಯಾಕ್ಕೆ ಅಪ್ಪಳಿಸಿದ ಮೇಸಕ್ ಚಂಡಮಾರುತದಿಂದ 2000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಈ ಎಲ್ಲಾ ಹೊಡೆತಗಳ ಕಾರಣ ನಿಕಟ ಭವಿಷ್ಯದಲ್ಲಿ ಉತ್ತರಕೊರಿಯಾದಿಂದ ಪ್ರಮುಖ ಬೆದರಿಕೆ ಅಥವಾ ಪ್ರಚೋದನೆ ಎದುರಾಗುವ ನಿರೀಕ್ಷೆಯಿಲ್ಲ. ಆದರೂ, ಮುಂದಿನ ತಿಂಗಳು ನಡೆಯಲಿರುವ ಅಧ್ಯಕ್ಷ ಕಿಮ್ ಜಾಂಗ್ ಯುನ್‌ರ ಪಕ್ಷದ 75ನೇ ವಾರ್ಷಿಕೋತ್ಸವದ ಸಂದರ್ಭ ಹೊಸ ಶಸ್ತ್ರಾಸ್ತ್ರದ ಬಲ ಪ್ರದರ್ಶನ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು . ಆದರೆ ಸದ್ಯಕ್ಕೆ ಅವರು ಕೊರೋನ ಸೋಂಕಿನ ಅಪಾಯವನ್ನು ಶಮನಗೊಳಿಸಿ, ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವತ್ತ ಆದ್ಯತೆ ನೀಡಿದ್ದಾರೆ ಎಂದು ಅಬ್ರಾಮ್ ಹೇಳಿದ್ದಾರೆ.

ಆದರೆ ಸಿಎಸ್‌ಐಎಸ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಉಪಗ್ರಹ ಚಿತ್ರದಲ್ಲಿ ಕಂಡು ಬರುವ ಉತ್ತರ ಕೊರಿಯಾದ ಸಿಂಪೊ ಸೌತ್ ಶಿಪ್‌ಯಾರ್ಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಸಬ್‌ಮೆರೀನ್ ಮೂಲಕ ಉಡಾಯಿಸಬಹುದಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷಾ ಪ್ರಯೋಗ ನಡೆಸುವ ಪೂರ್ವಸಿದ್ಧತೆಯಂತೆ ಭಾಸವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News