ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆ

Update: 2020-09-11 13:27 GMT

ಉಡುಪಿ, ಸೆ.11: ಜಿಲ್ಲೆಯಾದ್ಯಂತ ಶುಕ್ರವಾರ ಸಹ ದಿನವಿಡಿ ನಿರಂತರವಾಗಿ ಮಳೆ ಸುರಿದಿದ್ದು, ಆದರೆ ನೆರೆ ಸೇರಿದಂತೆ ಜನರಿಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಕೊನೆಯ ಕಾರ್ಯಕ್ರಮ ವಿಟ್ಲಪಿಂಡಿ ಸುರಿಯುವ ಮಳೆಯ ನಡುವೆಯೇ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಿತು.

ನಿನ್ನೆ ಸಂಜೆಯಿಂದ ಪ್ರಾರಂಭಗೊಂಡ ಮಳೆ, ಬಿಡುವಿರದ ರೀತಿಯಲ್ಲಿ ನಿರಂತರವಾಗಿ ಸುರಿಯಿತು. ಗುಡುಗು-ಸಿಡಿಲು ಸೇರಿದಂತೆ ಗಾಳಿಯ ಸುಳಿವೇ ಇಲ್ಲದ ಕಾರಣ ಈ ಬಾರಿಯ ಮಳೆ ಜನರಿಗೆ ಸಮಸ್ಯೆಯ ಸರಮಾಲೆಯನ್ನು ಸೃಷ್ಟಿಸಲಿಲ್ಲ. ಇಂಥ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕೃತಕ ನೆರೆಯೂ ಇಂದು ಜನರನ್ನು ಹೆಚ್ಚು ಬಾಧಿಸಲಿಲ್ಲ.

ಸತತ ಮಳೆಯಿಂದ ವಾತಾವರಣ ಸಂಪೂರ್ಣ ತಂಪಾದ ಕಾರಣ, ಜನರು ಚಳಿಯ ಅನುಭವವನ್ನು ಪಡೆದು ಹೆಚ್ಚಾಗಿ ಮನೆಯೊಳಗೆ ಉಳಿದುಕೊಂಡರು. ಕುಂದಾಪುರ, ಕಾರ್ಕಳ, ಹೆಬ್ರಿಯಲ್ಲೂ ಇದೇ ವಾತಾವರಣ ಕಂಡುಬಂದರೆ, ಬೈಂದೂರಿನಲ್ಲಿ ಮಾತ್ರ ಮಧ್ಯಾಹ್ನದವರೆಗೆ ಜೋರಾದ ಮಳೆ ಸುರಿದು ಬಳಿಕ ಸ್ವಲ್ಪ ವಿಶ್ರಾಂತಿ ಪಡೆಯಿತು.

ನಾಳೆಯೂ ಇದೇ ರೀತಿ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯ ಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 93ಮಿ.ಮೀ. ಮಳೆಯಾದ ಬಗ್ಗೆ ವರದಿ ಇದೆ. ಉಡುಪಿಯಲ್ಲಿ 135.6ಮಿ.ಮೀ., ಕುಂದಾಪುರ ದಲ್ಲಿ 69.5ಮಿ.ಮೀ. ಹಾಗೂ ಕಾರ್ಕಳದಲ್ಲಿ 90ಮಿ.ಮೀ. ಮಳೆಯಾಗಿದೆ.

ನಿರಂತರ ಮಳೆಯಿಂದ ಹೆಬ್ರಿ ತಾಲೂಕು ಮುದ್ರಾಡಿಯ ಸುರೇಂದ್ರ ಆಚಾರ್ಯ, ರಘು ಪೂಜಾರಿ ಅವರ ಮನೆಗೆ ಭಾಗಶ: ಹಾನಿಯಾಗಿದೆ. ಅದೇ ರೀತಿ ವಿಶ್ವನಾಥ ಬೆಳ್ಳಿತ್ತಾಯದ ಕೃಷಿ ಬೆಳೆ ಮಳೆಗೆ ಭಾಗಶ: ಹಾನಿಯಾಗಿದೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News