ಕೊರೋನ ಭೀತಿಯ ಮಧ್ಯೆ ಸರಳವಾಗಿ ಶ್ರೀಕೃಷ್ಣ ಲೀಲೋತ್ಸವ ಸಂಪನ್ನ
ಉಡುಪಿ, ಸೆ.11: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಉಡುಪಿಯ ಶ್ರೀಕೃಷ್ಣ ಮಠದ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಶ್ರೀಕೃಷ್ಣ ಜನ್ಮಾಷ್ಟಮಿಯು ಇಂದು ಸುರಿಯುತ್ತಿರುವ ಭಾರೀ ಮಳೆಯ ಮಧ್ಯೆ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ)ದೊಂದಿಗೆ ಸರಳ ವಾಗಿ ಸಂಪನ್ನಗೊಂಡಿತು.
ಜಿಲ್ಲಾಡಳಿತ ವಿಟ್ಲಪಿಂಡಿ ಪ್ರಯುಕ್ತ ಅಪರಾಹ್ನ ನಂತರ ಮಠದ ರಥಬೀದಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿತ್ತು. ಇದರಿಂದ ಜನ ಸಾಗರವೇ ಸೇರಿ ಸಂಭ್ರಮಿಸುವ ಶ್ರೀಕೃಷ್ಣ ಲೀಲೋತ್ಸವದ ವೈಭವದ ಶೋಭಾ ಯಾತ್ರೆಯಲ್ಲಿ ಕೆಲವೇ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ರಥಬೀದಿ ಪ್ರವೇಶಿಸುವ ನಾಲ್ಕು ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಇದರಿಂದ ಕೆಲವು ಸಾರ್ವಜನಿಕರು ಈ ರಸ್ತೆಯ ಗೇಟುಗಳ ಹಿಂದೆ ನಿಂತು ಶೋಭಾಯಾತ್ರೆ ವೀಕ್ಷಿಸಿದರು.
ಶ್ರೀಕೃಷ್ಣ ಲೀಲೋತ್ಸವದ ಶೋಭಾಯಾತ್ರೆಯಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿಯೊಂದಿಗೆ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥರು, ಪಲಿಮಾರು ಹಿರಿಯ ಶ್ರೀವಿದ್ಯಾಧೀಶ ತೀರ್ಥರು, ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರ ತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಕಾಣಿಯೂರು ಶ್ರೀವಿದ್ಯಾ ವಲ್ಲಭತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು.
ಶ್ರೀಕೃಷ್ಣನ ಮೃಣ್ಮಯಿ ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಇದರೊಂದಿಗೆ ನವರತ್ನ ರಥದಲ್ಲಿ ಅನಂತೇ ಶ್ವರ, ಚಂದ್ರಮೌಳೀಶ್ವರ ಉತ್ಸವ ಮೂರ್ತಿಯನ್ನಿರಿಸಿ ಮೆರವಣಿಗೆಯಲ್ಲಿ ತರಲಾಯಿತು.
ಈ ಸಂದರ್ಭದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ನಿಟ್ಟಿನಲ್ಲಿ ರಥಬೀದಿಯಲ್ಲಿ ನಿರ್ಮಿಸಿದ 12 ಗುರ್ಜಿಗಳಿಗೆ ಕಟ್ಟಿರುವ ಮೊಸರು, ಹಾಲು, ಓಕುಳಿಗಳು ತುಂಬಿರುವ ಮಣ್ಣಿನ ಮಡಕೆಗಳನ್ನು ಯಾದವ ವೇಷಧಾರಿಗಳಾದ ಉಡುಪಿಯ ಗೊಲ್ಲರು ಉದ್ದನೆಯ ಕೋಲುಗಳಿಂದ ಒಡೆಯುವ ಮೂಲಕ ಸಂಭ್ರಮಿಸಿ ದರು. ಈ ಬಾರಿಯ ವಿಶೇಷ ಎಂಬಂತೆ ರಥಬೀದಿ ಸುತ್ತ ವಿವಿಧ ತಳಿಯ ಗೋವುಗಳನ್ನು ಕಟ್ಟಲಾಗಿತ್ತು.
ಶೋಭಾಯಾತ್ರೆ ಮಧ್ಯೆ ಸ್ವಾಮೀಜಿಗಳು ಭಕ್ತರಿಗೆ ಈ ಬಾರಿ ಉಂಡೆ ಚಕ್ಕುಲಿ ಗಳನ್ನು ವೇದಿಕೆಯ ಮೇಲೇರಿ ಎಸೆಯುವ ಬದಲು ನೆಲದಲ್ಲಿಯೇ ನಿಂತು ಕೈಯಲ್ಲಿಯೇ ಹಂಚಿದರು. ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆಯಲ್ಲಿ ಶೋಭಾಯಾತ್ರೆಯಲ್ಲಿ ಯಾವುದೇ ವೇಷಗಳು ಕಾಣ ಸಿಗಲಿಲ್ಲ. ಸಾಂಪ್ರದಾಯಿಕ ವಾಗಿ ಕೆಲವರು ಯಕ್ಷಗಾನ ವೇಷವನ್ನು ಧರಿಸಿದ್ದರು. ಉದ್ಯಮಿ ರಂಜನ್ ಕಲ್ಕೂರ ಕನಕದಾಸರ ವೇಷ ಧರಿಸುವ ಮೂಲಕ ಗಮನ ಸೆಳೆದರು.
ನಂತರ ಮೆರವಣಿಗೆಯ ಕೊನೆಯಲ್ಲಿ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಕೃಷ್ಣ ಜನ್ಮಾಷ್ಟಮಿ ವಿಧಿಗಳು ಸಂಪನ್ನಗೊಂಡವು. ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ರುವ ಹಿನ್ನೆಲೆಯಲ್ಲಿ ರಥಬೀದಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಡಿಸಲಾಗಿತ್ತು.
ಅರ್ಘ್ಯ ಪ್ರದಾನ: ಕೃಷ್ಣ ಜಯಂತಿ ಪ್ರಯುಕ್ತ ಗುರುವಾರ ಮಧ್ಯರಾತ್ರಿ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯರು ಗರ್ಭಗುಡಿಯೊಳಗೆ ಕೃಷ್ಣದೇವರಿಗೆ ಅರ್ಘ್ಯ ನೀಡಿ ಚಂದ್ರೋದಯ ಸಮಯ ದಲ್ಲಿ (12:16ಕ್ಕೆ) ತುಳಸಿಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ನೀಡಿದರು. ಇವರ ಬಳಿಕ ಉಪಸ್ಥಿತರಿದ್ದ ಅದಮಾರು ಹಿರಿಯ, ಕಾಣಿಯೂರು, ಕೃಷ್ಣಾಪುರ ಮಠಾ ಧೀಶರೂ ಸರದಿಯಂತೆ ಅರ್ಘ್ಯ ನೀಡಿದರು. ಅನಂತರ ಭಕ್ತರಿಗೆ ಅರ್ಘ್ಯ ನೀಡಲು ಅವಕಾಶ ನೀಡಲಾಯಿತು.
ಇದಕ್ಕೆ ಮೊದಲು ಪರ್ಯಾಯಶ್ರೀಗಳು ರಾತ್ರಿ ಕೃಷ್ಣನಿಗೆ ತುಳಸಿ ಅರ್ಚನೆ ಸಹಿತ ಮಹಾಪೂಜೆ ನೆರವೇರಿಸಿದ್ದರು.ಇಂದು ಬೆಳಗ್ಗೆ ಕಾಣಿಯೂರು ಶ್ರೀಗಳು ಕೃಷ್ಣನಿಗೆ ಯಶೋಧ ಕೃಷ್ಣ ಅಲಂಕಾರ ಮಾಡಿದರು. ಇಂದು ಬೆಳಗಿನಿಂದ ರಾಜಾಂಗಣದಲ್ಲಿ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಲದೇ ಸೇರಿದ ಭಕ್ತಿಗೆ ಕೃಷ್ಣ ಪ್ರಸಾದವನ್ನು ವಿತರಿಸಲಾಯಿತು.