ಸುದರ್ಶನ್ ಟಿವಿಯ ವಿವಾದಾತ್ಮಕ ಕಾರ್ಯಕ್ರಮ ಪ್ರಸಾರಕ್ಕೆ ತಡೆಯಾಜ್ಞೆ ನೀಡಲು ದಿಲ್ಲಿ ಹೈಕೋರ್ಟ್ ನಕಾರ

Update: 2020-09-11 15:49 GMT

ಹೊಸದಿಲ್ಲಿ,ಸೆ.11: ನಾಗರಿಕ ಸೇವೆಗಳಲ್ಲಿ ಮುಸ್ಲಿಮರ ‘ನುಸುಳುವಿಕೆ ’ಯನ್ನು ಬಯಲಿಗೆಳೆಯುತ್ತದೆ ಎಂದು ಸುದರ್ಶನ್ ಟಿವಿ ವಾಹಿನಿಯು ಹೇಳಿಕೊಂಡಿರುವ ಕಾರ್ಯಕ್ರಮದ ಪ್ರಸಾರಕ್ಕೆ ತಡೆಯಾಜ್ಞೆ ನೀಡಲು ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ನಿರಾಕರಿಸಿದೆ. ನ್ಯಾಯಾಲಯವು ಈ ಸಂಬಂಧ ವಾಹಿನಿಗೆ ನೋಟಿಸೊಂದನ್ನು ಹೊರಡಿಸಿದೆ.

 ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಗುರುವಾರ ಟಿವಿ ವಾಹಿನಿಗಳ ಪೂರ್ವ ಸೆನ್ಸಾರ್‌ಶಿಪ್ ವ್ಯವಸ್ಥೆಯಿಲ್ಲ ಎನ್ನುವುದನ್ನು ಉಲ್ಲೇಖಿಸಿ ಕಾರ್ಯಕ್ರಮವು ನಿಗದಿತ ನೀತಿಸಂಹಿತೆಯನ್ನು ಉಲ್ಲಂಘಿಸದಂತೆ ನೋಡಿಕೊಳ್ಳುವಂತೆ ಸುದರ್ಶನ ವಾಹಿನಿಯ ಮುಖ್ಯಸ್ಥ ಸುರೇಶ್ ಚವಾಣಕೆ ಅವರಿಗೆ ಸೂಚಿಸಿತ್ತು.

ಸರಕಾರವು ತನ್ನ ನಿಲುವನ್ನು ಎತ್ತಿಹಿಡಿದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದ ಚವಾಣಕೆ,ವಾಹಿನಿಯು ತನ್ನ ‘ಬಿಂದಾಸ್ ಬೋಲ್’ಅನ್ನು ಶುಕ್ರವಾರ ರಾತ್ರಿ ಎಂಟು ಗಂಟೆಗೆ ಪ್ರಸಾರಿಸಲಿದೆ ಎಂದು ಹೇಳಿದ್ದರು.

ಈ ಕಾರ್ಯಕ್ರಮ ಕುರಿತು ವಿವಾದವು ಕಳೆದ ತಿಂಗಳು ಸರ್ವೋಚ್ಚ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯಗಳ ಮೆಟ್ಟಿಲುಗಳನ್ನೇರಿತ್ತು. ಕಾರ್ಯಕ್ರಮ ಪ್ರಸಾರವನ್ನು ನಿಷೇಧಿಸಲು ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿದ್ದರೆ,ದಿಲ್ಲಿಉಚ್ಚ ನ್ಯಾಯಾಲಯವು ಆ.28ರಂದು ರಾತ್ರಿ ಎಂಟು ಗಂಟೆಗೆ ಪ್ರಸಾರಗೊಳ್ಳಲಿದ್ದ ಕಾರ್ಯಕ್ರಮಕ್ಕೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News