ಮಂಗಳೂರು ಕೇಂದ್ರ ಮಾರುಕಟ್ಟೆಗೆ ನಿರ್ಬಂಧ: ದ.ಕ. ಜಿಲ್ಲಾಧಿಕಾರಿ ಆದೇಶಕ್ಕೆ ಹೈಕೋರ್ಟ್ ‌ಮತ್ತೆ ತಡೆಯಾಜ್ಞೆ

Update: 2020-09-11 16:48 GMT

ಮಂಗಳೂರು, ಸೆ.11: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೇಂದ್ರ ಮಾರುಕಟ್ಟೆಯನ್ನು ಬಂದ್ ಮಾಡಿಸಿದ್ದ ದ.ಕ. ಜಿಲ್ಲಾಧಿಕಾರಿಯ ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಶುಕ್ರವಾರ ಮತ್ತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

‘ಕೋವಿಡ್-19ರ ಸಂಬಂಧ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೇಂದ್ರ ಮಾರುಕಟ್ಟೆಯನ್ನು ಜಿಲ್ಲಾಡಳಿತ ಬಂದ್ ಮಾಡುತ್ತಿದೆ’ ಎಂಬುದಾಗಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆ. 18ರಂದು ಆದೇಶ ಹೊರಡಿಸಿದ್ದರು. ವ್ಯಾಪಾರಸ್ಥರು ಬೈಕಂಪಾಡಿಯ ಎಪಿಎಂಸಿಯಲ್ಲಿ ವ್ಯಾಪಾರ ಪುನಃ ಮುಂದುವರಿಸಲು ನಿರ್ದೇಶಿಸಿದ್ದರು. ಸೂಚನೆಗಳನ್ನು ಪಾಲಿಸದೇ ಇದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಆದೇಶದಲ್ಲಿ ಉಲ್ಲೇಖಿಸಿದ್ದರು.

ಜಿಲ್ಲಾಧಿಕಾರಿಯ ಆದೇಶವನ್ನು ಪ್ರಶ್ನಿಸಿ ಮಂಗಳೂರು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘವು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಶುಕ್ರವಾರ ಅರ್ಜಿದಾರರ ವಾದವನ್ನು ನ್ಯಾಯಾಧೀಶ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಆಲಿಸಿತು.

‘ಕೋವಿಡ್ ಕಂಟೈನ್‌ಮೆಂಟ್ ವಲಯವೆಂದು ಗುರುತಿಸಲು ಸದ್ಯ ಕೇಂದ್ರ ಸರಕಾರದ ಅನುಮತಿ ಅಗತ್ಯ. ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿದ ಜಿಲ್ಲಾಧಿಕಾರಿಯ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಜೊತೆಗೆ ಮಾರುಕಟ್ಟೆಯನ್ನು ವ್ಯಾಪಾರಸ್ಥರಿಗೆ ವ್ಯಾಪಾರ-ವಹಿವಾಟಿಗೆ ಮುಕ್ತಗೊಳಿಸಲು ಅವಕಾಶ ನೀಡಬೇಕು’ ಎಂದು ಅರ್ಜಿದಾರರ ಪರ ನ್ಯಾಯವಾದಿಗಳಾದ ಅಬ್ದುಲ್ ಲತೀಫ್ ಬಡಗಣ್ಣೂರು ಹಾಗೂ ರವಿಶಂಕರ್ ಅವರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು.

ಅಲ್ಲದೆ, ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಕೋವಿಡ್ ಹರಡುವಿಕೆ ತಡೆಗಟ್ಟುವ ಕೇಂದ್ರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದಾರೆ. ಕೋವಿಡ್‌ಗೆ ಸಂಬಂಧಿಸಿದಂತೆ ಅವಘಡ ಸಂಭವಿಸಿದ್ದಲ್ಲಿ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘವೇ ಹೊಣೆ ಹೊರಲಿದೆ ಎಂದೂ ನ್ಯಾಯವಾದಿಗಳು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಅರ್ಜಿದಾರರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು, ‘ಕೇಂದ್ರ ಸರಕಾರದಿಂದ ದೇಶಾದ್ಯಂತ ಅನ್‌ಲಾಕ್-4ರಂತೆ ಬಹುತೇಕ ಸಡಿಲಿಕೆ ಮಾಡಲಾಗಿದ್ದು, ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಲಾಗಿದೆ. ಕೋವಿಡ್ ಹೆಸರಲ್ಲಿ ವ್ಯಾಪಾರ ಮಾಡುವುದನ್ನು ನಿರ್ಬಂಧಿಸುವುದು ಸಮಂಜಸವಲ್ಲ’ ಎಂಬುದಾಗಿ ಉಲ್ಲೇಖಿಸಿದರು. ಬಳಿಕ ಜಿಲ್ಲಾಧಿಕಾರಿಯ ಆದೇಶಕ್ಕೆ ನ್ಯಾಯಾಲಯವು ಮತ್ತೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

‘ಜಿಲ್ಲಾಧಿಕಾರಿಯ ಆದೇಶದ ಬಳಿಕ ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದು, ಆ.18ರಿಂದ ಅನ್ವಯವಾಗುವಂತೆ ಪ್ರತಿದಿನ 3,000 ರೂ.ಯಂತೆ ಸರಕಾರವು ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದೇವೆ’ ಎಂದು ಅರ್ಜಿದಾರರ ಪರ ವಾದಿಸಿದ್ದ ನ್ಯಾಯವಾದಿ ಅಬ್ದುಲ್ ಲತೀಫ್ ಬಡಗಣ್ಣೂರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಜಿಲ್ಲಾಡಳಿತದ ಪರವಾಗಿ ರಾಜ್ಯ ಸರಕಾರದ ಪಬ್ಲಿಕ್ ಪ್ರಾಸಿಕ್ಯೂಟರ್ ನಿಲೋಫರ್ ಅಕ್ಬರ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News