ಕಾಸರಗೋಡು : ಕೊಲೆ ಪ್ರಕರಣ; ಆರೋಪಿ ಬಿಜೆಪಿ ಕಾರ್ಯಕರ್ತನಿಗೆ ಜೀವಾವಧಿ ಸಜೆ, ದಂಡ
ಕಾಸರಗೋಡು : ಸಿಪಿಎಂ ಕಾರ್ಯಕರ್ತ ಕುಂಬಳೆ ಶಾಂತಿಪಳ್ಳದ ಪಿ.ಮುರಳಿ (35) ಕೊಲೆ ಪ್ರಕರಣದ ಆರೋಪಿ ಬಿಜೆಪಿ ಕಾರ್ಯಕರ್ತ ಅನಂತಪುರದ ಶರತ್ ರಾಜ್ ಎಂಬಾತನಿಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ ( 2) ನ್ಯಾಯಾಲಯ ಕಠಿಣ ಜೀವಾವಧಿ ಸಜೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ಶುಕ್ರವಾರ ತೀರ್ಫು ನೀಡಿದೆ.
ದಂಡದ ಮೊತ್ತವನ್ನು ಕೊಲೆಗೀಡಾದ ಮುರಳಿಯ ಕುಟುಂಬಕ್ಕೆ ನೀಡಲು ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದಲ್ಲಿ ಒಟ್ಟು 7 ಮಂದಿ ಆರೋಪಿಗಳಿದ್ದು, 6 ಮಂದಿಯನ್ನು ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಖುಲಾಸೆ ಗೊಳಿಸಿದೆ. ದಿನೇಶ್, ವರದರಾಜ್ , ಮಿಥುನ್ ಕುಮಾರ್ , ನಿತಿನ್ ರಾಜ್ , ಮಹೇಶ್, ಅಜಿತ್ ಕುಮಾರ್ ಎಂಬವರನ್ನು ಖುಲಾಸೆಗೊಳಿಸಿದೆ.
2017ರ ಅ.17ರಂದು ಸಂಜೆ 5 ಗಂಟೆಗೆ ಕೃತ್ಯ ನಡೆದಿತ್ತು. ಸೀತಾಂಗೋಳಿ ಸಮೀಪ ಮುರಳಿ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾವನ್ನು ತಡೆದ ತಂಡವು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದಿತ್ತು.
ಪ್ರಾಸಿಕ್ಯೂಷನ್ ಪರ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅಬ್ದುಲ್ ಸತ್ತಾರ್ ಹಾಜರಾಗಿದ್ದರು.