ಕೊರೋನ: 10 ಲಕ್ಷದ ಮೈಲುಗಲ್ಲು ದಾಟಿದ ಮಹಾರಾಷ್ಟ್ರ
ಹೊಸದಿಲ್ಲಿ, ಸೆ.12 ಕೊರೋನ ವೈರಸ್ ಸೋಂಕಿನಿಂದ ದೇಶದಲ್ಲಿ ಅತ್ಯಧಿಕವಾಗಿ ಬಾಧಿತವಾಗಿರುವ ಮಹಾರಾಷ್ಟ್ರ ಶುಕ್ರವಾರ 10 ಲಕ್ಷ ಪ್ರಕರಣಗಳ ಮೈಲುಗಲ್ಲು ದಾಟಿದೆ. ಅಂತೆಯೇ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಒಂದೇ ದಿನ 1,200 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಶುಕ್ರವಾರ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ ಒಂದು ಲಕ್ಷದ ಸನಿಹದಲ್ಲಿದೆ.
ಮಹಾರಾಷ್ಟ್ರದಲ್ಲಿ ಶುಕ್ರವಾರ 24,886 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶಾದ್ಯಂತ 97,937 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ ಎನ್ನುವುದು ರಾಜ್ಯಗಳಿಂದ ಸಂಗ್ರಹಿಸಿದ ಅಂಕಿಅಂಶಗಳಿಂದ ತಿಳಿದುಬಂದಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 1,249 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸತತ ಐದನೇ ದಿನ ಸಾವಿನ ಸಂಖ್ಯೆ ಸಾವಿರಕ್ಕಿಂತ ಅಧಿಕವಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 442 ಸಾವು ಸಂಭವಿಸಿದೆ.
ದೇಶದಲ್ಲಿ ಶುಕ್ರವಾರ ದಾಖಲಾಗಿರುವ ಪ್ರಕರಣಗಳು ಇದುವರೆಗೆ ಒಂದೇ ದಿನ ದಾಖಲಾದ ಗರಿಷ್ಠ ಸಂಖ್ಯೆಯ ಪ್ರಕರಣಗಳಾಗಿವೆ. ಬುಧವಾರ 97,399 ಪ್ರಕರಣಗಳು ದಾಖಲಾದದ್ದು ಇದುವರೆಗಿನ ಗರಿಷ್ಠ ಸಂಖ್ಯೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ಅಮೆರಿಕದಲ್ಲಿ ಜುಲೈ 25ರಂದು ದಾಖಲಾದ 78,427 ಪ್ರಕರಣಗಳು ದಾಖಲೆಯಾಗಿತ್ತು.
ಮಹಾರಾಷ್ಟ್ರ ಹೊರತುಪಡಿಸಿ ಉತ್ತರ ಪ್ರದೇಶ (7,103), ಒಡಿಶಾ (3,996), ಪಂಜಾಬ್ (2,526), ಮಧ್ಯಪ್ರದೇಶ (2,240), ರಾಜಸ್ಥಾನ (1,660) ಮತ್ತು ಗುಜರಾತ್ (1,344) ಕೂಡಾ ಶುಕ್ರವಾರ ಇದುವರೆಗಿನ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ಕಂಡಿವೆ.
ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 10 ಲಕ್ಷ ದಾಟುವುದರೊಂದಿಗೆ ದೇಶದ ಒಟ್ಟು ಸಂಖ್ಯೆ 46,53,193ರ ಪೈಕಿ ಶೇಕಡ 22ರಷ್ಟು ಸೋಂಕು ಒಂದೇ ರಾಜ್ಯದಲ್ಲಿ ಕಾಣಿಸಿಕೊಂಡಂತಾಗಿದೆ. ಜಾಗತಿಕವಾಗಿ ಪ್ರತಿದಿನ ಎರಡು ಲಕ್ಷ ಪ್ರಕರಣಗಳು ಸೇರ್ಪಡೆಯಾಗುತ್ತಿವೆ. ಸೋಂಕಿಗೆ ತುತ್ತಾಗುತ್ತಿರುವ ಪ್ರತಿ 8 ಮಂದಿಯಲ್ಲಿ ಒಬ್ಬರು ಮಹಾರಾಷ್ಟ್ರದವರು!
ವಿಶ್ವದಲ್ಲೇ ನಾಲ್ಕನೇ ಅತಿಹೆಚ್ಚು ಪ್ರಕರಣಗಳನ್ನು ಕಂಡ ರಶ್ಯದ ಒಟ್ಟು ಸಂಖ್ಯೆಯನ್ನು ಮಹಾರಾಷ್ಟ್ರ ಸಮೀಪಿಸುತ್ತಿದೆ. ರಶ್ಯಲ್ಲಿ 10.5 ಲಕ್ಷ ಪ್ರಕರಣಗಳು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 10,15,681. ಆಂಧ್ರ ಪ್ರದೇಶದಲ್ಲಿ ಶುಕ್ರವಾರ 9,999 ಪ್ರಕರಣಗಳು ದಾಖಲಾಗಿದ್ದು, 77 ಮಂದಿ ಮೃತಪಟ್ಟಿದ್ದಾರೆ.