×
Ad

ದೇಶದಲ್ಲಿ ಸತತ ಐದನೇ ತಿಂಗಳು ಫ್ಯಾಕ್ಟರಿ ಉತ್ಪಾದನೆ ಕುಸಿತ

Update: 2020-09-12 09:29 IST

ಹೊಸದಿಲ್ಲಿ, ಸೆ.12: ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಪಿಪಿ)ದಿಂದ ಅಳೆಯಲಾಗುವ ಭಾರತದ ಫ್ಯಾಕ್ಟರಿ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈನಲ್ಲಿ ಶೇಕಡ 10.4ರಷ್ಟು ಕುಸಿತ ದಾಖಲಿಸಿದೆ. ಅಂಕಿಅಂಶಗಳು ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ಈ ಅಂಶ ಬಹಿರಂಗವಾಗಿದೆ. ಭಾರತದ ಐಪಿಪಿ ಸತತ ಐದನೇ ತಿಂಗಳು ಕುಸಿತ ದಾಖಲಿಸಿದೆ. ರಾಯ್ಟರ್ಸ್‌ ಮುನ್ಸೂಚನೆಯಲ್ಲಿ ಭಾರತದ ಐಪಿಪಿ 11.5ರಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿತ್ತು.

ಆದರೆ ಕೈಗಾರಿಕಾ ಚಟುವಟಿಕೆಗಳು ಹಂತಹಂತವಾಗಿ ಹೆಚ್ಚುತ್ತಿರುವುದು ಭಾರತದ ಪಾಲಿಗೆ ಆಶಾಕಿರಣವಾಗಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲೂ ಈ ಪುನಶ್ಚೇತನ ಮುಂದುವರಿಯುವ ಸಾಧ್ಯತೆ ಇದೆ ಎನ್ನುವುದು ತಜ್ಞರ ಅಭಿಮತ. ಆದರೆ ವಿತ್ಥೀಯ ಉತ್ತೇಜನ ಕೊರತೆ ಮತ್ತು ಬೇಡಿಕೆ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳದಿರುವುದು ಇದಕ್ಕೆ ತಡೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈನಲ್ಲಿ ಕೈಗಾರಿಕಾ ಚಟುವಟಿಕೆಗಳ ಮಟ್ಟ ಎಲ್ಲ ವರ್ಗದಲ್ಲೂ ಕಡಿಮೆ. ಗಣಿಗಾರಿಕೆ, ಉತ್ಪಾದನೆ ಹಾಗೂ ವಿದ್ಯುತ್ ಹೀಗೆ ವಿವಿಧ ವರ್ಗಗಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಲೆಕ್ಕ ಹಾಕಲಾಗುತ್ತದೆ. ಬಳಕೆ ಆಧರಿತ ವರ್ಗಗಳಲ್ಲಿ ಪ್ರಾಥಮಿಕ ಸರಕು, ಮಧ್ಯಂತರ ಸರಕು, ಬಂಡವಾಳ ಸರಕು, ಮೂಲಸೌಕರ್ಯ ಸರಕು ಹಾಗೂ ಗ್ರಾಹಕ ವಸ್ತುಗಳು ಸೇರುತ್ತವೆ.

ಬಳಕೆ ಆಧರಿತ ವರ್ಗಗಳಿಂದ ತಿಳಿದುಬರುವಂತೆ ಪ್ರಗತಿಯ ಚಾಲನಾ ಶಕ್ತಿ ಎನಿಸಿದ ಬಳಕೆ ಹಾಗೂ ಹೂಡಿಕೆಯ ಚಿತ್ರಣ ಕಳವಳಕಾರಿಯಾಗಿದೆ. ಭಾರತದ ಕೈಗಾರಿಕಾ ಉತ್ಪಾದನೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡ 38ರಷ್ಟು ಕುಸಿತ ಕಂಡಿತ್ತು. ಒಟ್ಟಾರೆ ಜಿಡಿಪಿ ಶೇಕಡ 23.9ರಷ್ಟು ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News