×
Ad

ಉದ್ಧವ್ ಠಾಕ್ರೆ ವ್ಯಂಗ್ಯಚಿತ್ರ ಶೇರ್ ಮಾಡಿದ ನಿವೃತ್ತ ನೌಕಾಪಡೆ ಅಧಿಕಾರಿ ಮೇಲೆ ಹಲ್ಲೆಯ ವಿಡಿಯೊ ವೈರಲ್

Update: 2020-09-12 09:38 IST

ಮುಂಬೈ, ಸೆ.12: ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ವ್ಯಂಗ್ಯಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಆರೋಪದಲ್ಲಿ ಆಡಳಿತಾರೂಢ ಶಿವಸೇನೆ ಕಾರ್ಯಕರ್ತರು ನಿವೃತ್ತ ನೌಕಾಪಡೆ ಅಧಿಕಾರಿಯೊಬ್ಬರನ್ನು ಹಿಗ್ಗಾ ಮುಗ್ಗಾ ಥಳಿಸಿದ ಅಮಾನವೀಯ ಕೃತ್ಯದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಾಯಗೊಂಡ ಮುಖ ಮತ್ತು ರಕ್ತಸಿಕ್ತ ಕಣ್ಣಿನ ಚಿತ್ರಗಳನ್ನು ಮದನ್ ಶರ್ಮಾ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 65 ವರ್ಷ ವಯಸ್ಸಿನ ಶರ್ಮಾ ಅವರ ಮೇಲೆ ಮುಂಬೈನ ಕೊಂಡಿವಲ್ಲಿ ಪೂರ್ವ ಪ್ರದೇಶದಲ್ಲಿರುವ ಅವರ ನಿವಾಸದ ಸಮೀಪ ಹಲ್ಲೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಮ್ಮ ನಿವಾಸಿಗಳ ಸಂಘದ ವಾಟ್ಸ್ ಆ್ಯಪ್ ಗ್ರೂಪ್‌ಗೆ ಒಂದು ಕಾರ್ಟೂನ್ ಫಾರ್ವರ್ಡ್ ಮಾಡಿದ್ದಾಗಿ ಶರ್ಮಾ ದೂರಿನಲ್ಲಿ ವಿವರಿಸಿದ್ದಾರೆ. ಬಳಿಕ ಕಮಲೇಶ್ ಕದಂ ಎಂಬಾತ ಕರೆ ಮಾಡಿ ಹೆಸರು ಮತ್ತು ವಿಳಾಸ ಕೇಳಿದ್ದಾನೆ. ಮಧ್ಯಾಹ್ನ ಮನೆಯಿಂದ ಹೊರಗೆ ಕರೆದು ಗುಂಪು ಹಲ್ಲೆ ನಡೆಸಿದೆ ಎಂದು ಹೇಳಿದ್ದಾರೆ. ಭದ್ರತಾ ವ್ಯವಸ್ಥೆಯ ಸಿಸಿಟಿವಿ ದೃಶ್ಯಾವಳಿಯನ್ನು ವ್ಯಾಪಕವಾಗಿ ಷೇರ್ ಮಾಡಲಾಗಿದ್ದು, ಇದರ ಪ್ರಕಾರ ಮಾಸ್ಕ್‌ಗಳನ್ನು ಧರಿಸಿದ್ದ ಮಂದಿಯ ಗುಂಪು ಹಲ್ಲೆ ನಡೆಸಿದೆ.

ಶರ್ಮಾ ತಮ್ಮ ಅಪಾರ್ಟ್‌ಮೆಂಟ್‌ನ ಮುಖ್ಯದ್ವಾರದಿಂದ ಹೊರ ಬರುತ್ತಿರುವುದು ಹಾಗೂ ಸ್ವಲ್ಪ ಹೊತ್ತಿನಲ್ಲಿ ಗೇಟಿನ ಒಳಗೆ ಓಡಿ ಬರುತ್ತಿರುವ ಅವರನ್ನು ಗುಂಪು ಅಟ್ಟಿಸಿಕೊಂಡು ಬರುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅವರ ಅಂಗಿ ಹಿಡಿದು ಎಳೆದು ಗುದ್ದುತ್ತಿರುವುದು ಕೂಡಾ ಕಂಡುಬರುತ್ತಿದೆ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಗಾಯಾಳು ಮದನ್ ಶರ್ಮಾ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News