ಮಂಗಳೂರು: ಮಳೆಹಾನಿ ಪ್ರದೇಶಗಳಿಗೆ ಐವನ್ ಡಿಸೋಜ ಭೇಟಿ
ಮಂಗಳೂರು, ಸೆ.12: ನಗರದಲ್ಲಿ ವಿವಿಧ ಕಡೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ವಿಪರೀತ ಮಳೆಗೆ ಅನೇಕ ಮನೆಗಳ ಆವರಣಗಳ ಕುಸಿತ, ತೋಟಗಾರಿಕಾ ಬೆಳೆ ನಷ್ಟ, ವಿವಿಧ ಹಂತದಲ್ಲಿ ನಷ್ಟ ಸಂಭವಿಸಿದೆ. ಈ ಬಗ್ಗೆ ತಕ್ಷಣ ಪುನರ್ ವ್ಯವಸ್ಥೆ ಹಾಗೂ ಮಳೆಯಿಂದಾದ ನಷ್ಟವನ್ನು ಅಂದಾಜಿಸಿ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ಮಳೆ ಹಾನಿ ಸಂಭವಿಸಿದ ವಿವಿಧ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಅವರು, ಮಳೆ ಹಾನಿ ವೀಕ್ಷಿಸಿದರು. ಶಾಸಕರು ಹಾಗೂ ಉಸ್ತುವಾರಿ ಸಚಿವರು ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕೆಂದು ರಾಜ್ಯ ಹಾಗೂ ಜಿಲ್ಲಾಡಳಿತವನ್ನು ಅವರು ಆಗ್ರಹಿಸಿದರು.
ದೇರೆಬೈಲ್ ಕೊಂಚಾಡಿಯ ವಸತಿಗೃಹದಲ್ಲಿ 210 ಕುಟುಂಬಗಳು ವಾಸಮಾಡುತ್ತಿದ್ದು, ವಸತಿಗೃಹದ ಹಿಂದಿನ ಗೋಡೆಯು ಕುಸಿದು ಬಿದ್ದುದರಿಂದ ಅಲ್ಲಿ ವಾಸ ಮಾಡಲು ಸುರಕ್ಷತೆ ಇದೆಯೇ? ಎಂದು ಕೂಡಲೇ ತಾಂತ್ರಿಕ ಪರಿಣತರಿಂದ ವರದಿ ತರಿಸಿ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.
ವಾಸವಾಗಿದ್ದ ಕುಟುಂಬಗಳು ಬೀದಿಪಾಲಾಗಿದ್ದು, ಗೋಡೆಯ ಆವರಣವನ್ನು ಪುನರ್ ವ್ಯವಸ್ಥೆ ಮಾಡುವ ವಸತಿ ಖರ್ಚು ವೆಚ್ಚ ಭರಿಸಬೇಕೆಂದು, ಮುಂದಕ್ಕೆ ಆ ಸ್ಥಳದಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿ, ತಡೆಗೋಡೆ ಕಟ್ಟಿ, ಸುರಕ್ಷತೆಯಿಂದ ಪುನರ್ ವ್ಯವಸ್ಥೆಗೆ ವಸತಿ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯ ಮಾಡಿದರಲ್ಲದೆ, ಸ್ಥಳದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ರಾಜು, ಲವೀನಾ ಪಿಂಟೊ, ಆಲಿಸ್ ಡಿ ಕುನ್ಹಾ, ಸತೀಶ್ ಪೆಂಗಳ್, ನಾಗೇಂದ್ರ ಕುಮಾರ್ ಮತ್ತು ವಸತಿ ಸಂಕೀರ್ಣದ ಪದಾಧಿಕಾರಿಗಳು ಹಾಗೂ ಅಲ್ಲಿನ ನಿವಾಸಿಗಳು ಉಪಸ್ಥಿತರಿದ್ದರು.